ಬೆಳಗಾವಿ ಕಾರಂಜಿ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ:
ವಚನಗಳಿಂದ ಅಂತರಂಗ ಶುದ್ಧಿ : ಡಾ. ಸಂಜಯ ಸಿಂಧೆಹಟ್ಟಿ
ಬೆಳಗಾವಿಯ ಕಾರಂಜಿ ಮಠದಲ್ಲಿ 288ನೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ
“ಶರಣರ ವಚನಗಳಲ್ಲಿ ಆತ್ಮವಿಮರ್ಶೆ”ವಿಷಯ ಕುರಿತು ಉಪನ್ಯಾಸ ನೀಡಲಾಯಿತು
ಸೋಮವಾರ ಬೆಳಗಾವಿ ಕಾರಂಜಿ ಮಠದಲ್ಲಿ ಆಯೋಜಿಸಲಾಗಿದ್ದ ಮಾಸಿಕ ಶಿವಾನುಭವ ಘೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಮೂಡಲಗಿ ದಂತ ವೈದ್ಯ ಡಾ. ಸಂಜಯ ಸಿಂಧೆಹಟ್ಟಿ, ಶರಣರ ವಚನಗಳಲ್ಲಿರುವ ಜೀವನದ ಮೌಲ್ಯಗಳು ಬದುಕಿಗೆ ಸ್ಪೂರ್ತಿ ನೀಡಿ ದಾರಿ ತೋರಿಸುತ್ತವೆ.
ಯಾರಾದರೂ ನಮ್ಮನ್ನು ನಿಂದಿಸಿದರೆ, ನೋಯಿಸಿದರೆ ಅದಕ್ಕೆ ಪ್ರತಿಕ್ರಿಯಿಸದೆ, ನೊಂದುಕೊಳ್ಳದೆ ಸುಮ್ಮನಿರಬೇಕು. ಶಿಕ್ಷೆ ನೀಡಲು ರಕ್ಷಣೆ ಮಾಡಲು ಭಗವಂತನಿದ್ದಾನೆ ಎಂಬುದನ್ನರಿತು ಜೀವಿಸಬೇಕು. ವಚನಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾ ಅವುಗಳ ಅನುಭವದಿಂದ ಆತ್ಮವಿಮರ್ಶೆ ಮಾಡಿಕೊಂಡರೆ ನಮ್ಮ ಅಂತರಂಗ ಶುದ್ದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ವಚನಗಳು ಭಕ್ತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಸಮಾನತೆ, ಕಾಯಕ, ದಾಸೋಹ ಮತ್ತು ಪ್ರಾಮಾಣಿಕತೆಯಂತಹ ಮಾನವೀಯ ಮೌಲ್ಯಗಳನ್ನು ತಿಳಿಸಿ ಕೊಡುತ್ತವೆ ಎಂದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ. ಹೇಮಾ ಸೊನೊಳ್ಳಿ ಅವರು ಕಾರಂಜಿ ಮಠದ ಸೇವಾ ಕಾರ್ಯಗಳನ್ನು ಪ್ರಶಂಶಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯನ್ನು ಪ್ರಾರಂಭಿಸಿ ಸಮಾಜ ಸೇವೆ ಮಾಡುತ್ತಾ ಸಾರ್ಥಕ 75 ವರ್ಷಗಳನ್ನು ಪೂರೈಸಿದ ಆದರ್ಶ ಶಿಕ್ಷಕ ದಂಪತಿಗಳಾದ ಎಂ. ಎಸ್. ಚೌಗುಲ ಹಾಗೂ ವೈಜಯಂತಿ ಚೌಗಲಾ ದಂಪತಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಎ.ಕೆ. ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥಿಸಿದರು. ಕೊನೆಗೆ ನ್ಯಾಯವಾದಿ ವಿ.ಕೆ. ಪಾಟೀಲ ವಂದಿಸಿದರು.