Breaking News

ರಾಜಧಾನಿಯಲ್ಲಿ ಟೋಯಿಂಗ್ ಮರುಜಾರಿ ಸದ್ಯಕ್ಕಿಲ್ಲ

Spread the love

ಬೆಂಗಳೂರು: ಮೂರು ವರ್ಷಗಳ ಬಳಿಕ ರಾಜಧಾನಿಯಲ್ಲಿ ಟೋಯಿಂಗ್ ಮರುಜಾರಿಗೆ ಹಲವು ಸಭೆಗಳನ್ನ ರಾಜ್ಯ ಸರ್ಕಾರ ಚರ್ಚೆ ನಡೆಸಿದರೂ ಒಮ್ಮತದ ನಿರ್ಧಾರದ ಬಗ್ಗೆ ಜಿಜ್ಞಾಸೆ ಮೂಡಿದ ಪರಿಣಾಮ ಸದ್ಯಕ್ಕೆ ಟೋಯಿಂಗ್ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದಾಗಿ ನಗರದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮುಖ್ಯವಾಗಿ ಪೀಕ್ ಅವರ್​​ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಸವಾರರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಟೋಯಿಂಗ್ ಮತ್ತೆ ಆರಂಭಿಸುವುದಾಗಿ ಸರ್ಕಾರ ಹೇಳಿತ್ತು. ಈ ಬಾರಿ ಖಾಸಗಿ ಏಜೆನ್ಸಿ ನಿಯೋಜಿಸದೇ ಇಲಾಖೆಯ ಸಿಬ್ಬಂದಿ ಬಳಕೆ ಜೊತೆ ಅಗತ್ಯವಾದರೆ ಪೂರಕವಾಗಿ ಗೃಹ ರಕ್ಷಕರನ್ನ ಬಳಸಿಕೊಂಡು ಟೊಯಿಂಗ್ ಅನುಷ್ಠಾನ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಆರಂಭಿಸುವುದಾಗಿ ಹೇಳಿತ್ತು.

ಬೇಕಿದೆ 3 ರಿಂದ 4 ಕೋಟಿ ರೂ ಅನುದಾನ : ಟೋಯಿಂಗ್ ಜಾರಿಯ ರೂಪುರೇಷೆಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಗೃಹ ಇಲಾಖೆಯು ನಿರಂತರ ಸಭೆಗಳನ್ನ ನಡೆಸಿ ಚರ್ಚೆ ನಡೆಸಿದರೂ ಇದುವರೆಗೂ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಮುಖ್ಯವಾಗಿ ನಗರದಲ್ಲಿ ಟೋಯಿಂಗ್ ಜಾರಿಗಾಗಿ ವಾಹನಗಳ ಖರೀದಿ, ಉಪಕರಣಗಳ ನಿರ್ವಹಣೆ, ಇಂಧನ ವೆಚ್ಚ, ಹೆಚ್ಚುವರಿಯಾಗಿ ಗೃಹ ರಕ್ಷಕರನ್ನ ನಿಯೋಜಿದರೆ ಅವರ ತರಬೇತಿ ವೆಚ್ಚ ಸೇರಿದಂತೆ ಸುಮಾರು 3ರಿಂದ 4 ಕೋಟಿ ರೂ. ಅನುದಾನದ ಅಗತ್ಯವಿದೆ. ಆದರೆ, ಈ ಹಣ ಒದಗಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2022ರವರೆಗೂ ಚಾಲ್ತಿಯಲ್ಲಿದ್ದ ಟೋಯಿಂಗ್​: ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ಅಭೂತಪೂರ್ವ ಬೆಳವಣಿಗೆ ಕಂಡಿದೆ. ರಾಜಧಾನಿಯಲ್ಲಿ ಸುಮಾರು 1.20 ಕೋಟಿ ವಾಹನಗಳಿದ್ದು, ಈ ಪೈಕಿ ಶೇ.70ರಷ್ಟು ದ್ವಿಚಕ್ರವಾಹನಗಳು ನೋಂದಣಿಯಾಗಿವೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಅಗಲೀಕರಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸದ ಕಾರಣ ಇಂದು ವಿಪರೀತ ಸಂಚಾರ ದಟ್ಟಣೆಯಾಗಿದೆ. ವಾಹನಗಳನ್ನ ಎಲ್ಲೆಂದರಲ್ಲಿ ನಿಲ್ಲಿಸುವುದನ್ನ ತಡೆಯಲು 2022ರವರೆಗೆ ಟೊಯಿಂಗ್ ಚಾಲ್ತಿಯಲ್ಲಿತ್ತು. ಅವೈಜ್ಞಾನಿಕ ಟೋಯಿಂಗ್ ಪದ್ಧತಿ, ಅಧಿಕ ದಂಡ ಹಾಗೂ ಭ್ರಷ್ಟಾಚಾರದಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದರಿಂದ ಟೊಯಿಂಗ್ ರದ್ದುಪಡಿಸಿತ್ತು. ಇದೀಗ ಮೂರು ವರ್ಷಗಳ ಬಳಿಕ ಟೊಯಿಂಗ್ ಆರಂಭಿಸುವುದಾಗಿ ಹೇಳಿದೆ. ಆದರೆ ಹಣಕಾಸು ಕೊರತೆ, ಟೋಯಿಂಗ್ ಜಾರಿಗಾಗಿ ಎದುರಾಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಹಂತದಲ್ಲಿದೆ. ಹೀಗಾಗಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ ಸದ್ಯಕ್ಕೆ ಟೋಯಿಂಗ್ ಪ್ರಾರಂಭ ಬಹುತೇಕ ಅನುಮಾನವಾಗಿದೆ.

ಟೋಯಿಂಗ್ ಜಾರಿಗಾಗಿ ಇರುವ ನ್ಯೂನತೆಗಳೇನು ?: ಸಂಚಾರ ವಿಭಾಗದಲ್ಲಿ ಸದ್ಯ 6 ಸಾವಿರಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಭಂದಿಗಳಿದ್ಧಾರೆ. ಟ್ರಾಫಿಕ್ ಜಾಮ್ ಹೆಚ್ಚಾದಂತೆ ಸಂಚಾರ ಪೊಲೀಸ್ ಠಾಣೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಪೂರಕವಾಗಿ ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿಗಳ ಅಗತ್ಯವಿದ್ದು, ಸದ್ಯ ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದರಿಂದ ಕಾರ್ಯಾಭಾರ ಅಧಿಕವಾಗುತ್ತಿದೆ. ಈ ಮಧ್ಯೆ ಟೋಯಿಂಗ್ ಜವಾಬ್ದಾರಿ ನಿರ್ವಹಣೆ ಕಷ್ಟಸಾಧ್ಯ. ಹೀಗಾಗಿ ಪೂರಕವಾಗಿ ಗೃಹ ರಕ್ಷಕರನ್ನೇ ಬಳಸಿಕೊಂಡು ಟೊಯಿಂಗ್ ಆರಂಭಿಸುವುದಾಗಿ ಸರ್ಕಾರ ಹೇಳಿತ್ತು. ನಿಯಮ ಜಾರಿ ಮುನ್ನ ಟೋಯಿಂಗ್ ಬಗ್ಗೆಗಿನ ಕಾನೂನಿನ ಅರಿವು, ವಾಹನಗಳಿಗೆ ಧಕ್ಕೆಯಾಗದಂತೆ ಟೋಯಿಂಗ್ ಮಾಡುವುದು ಹೇಗೆ ? ಹಾಗೂ ಸವಾರರೊಂದಿಗಿನ ವರ್ತನೆ ಸೇರಿದಂತೆ ಹಲವು ಅಂಶಗಳ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ.

ಈ ಎಲ್ಲ ವ್ಯವಸ್ಥೆ ಬೇಕಿದೆ; ಟೊಯಿಂಗ್​​ಗಾಗಿ ಪ್ರತಿ ಸಂಚಾರ ವಿಭಾಗಕ್ಕೆ ಕನಿಷ್ಠ ಎರಡರಂತೆ ಒಟ್ಟು ನಾಲ್ಕು ಸಂಚಾರ ವಿಭಾಗಗಳಿಗೆ 8 ಟೋಯಿಂಗ್ ವಾಹನಗಳಾದರೂ ಅಗತ್ಯವಿದೆ. ಬೆಳಗ್ಗಿನಿಂದ ಸಂಜೆವರೆಗೂ ಟೋಯಿಂಗ್ ವಾಹನ ಕಾರ್ಯಾಚರಣೆ ನಡೆಸುವ ನಿರ್ಧಾರಕ್ಕೆ ಬಂದರೆ ತಗುಲುವ ಇಂಧನ ವೆಚ್ಚ ಎಷ್ಟು ? ಚಾಲಕ ಸೇರಿದಂತೆ ಕನಿಷ್ಟ ಮೂವರು ಸಿಬ್ಬಂದಿಗಳಾದರೂ ಇರಬೇಕು. ವಾಹನಗಳ ನಿರ್ವಹಣೆ – ದುರಸ್ತಿ ಇನ್ನಿತರ ಖರ್ಚು ಒಳಗೊಂಡಂತೆ ಸುಮಾರು 4 ಕೋಟಿ ರೂ. ಬೇಕಾಗಲಿದೆ. ಇದನ್ನ ಸರ್ಕಾರ ಒದಗಿಸುವ ಭರವಸೆ ನೀಡದ ಕಾರಣ ಟೊಯಿಂಗ್ ಜಾರಿ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ಸವಾರರ ಅಭಿಪ್ರಾಯಗಳೇನು?: ಟೋಯಿಂಗ್ ಮರು ಜಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅವೈಜ್ಞಾನಿಕ ನಿಯಮಗಳನ್ನ ರೂಪಿಸಿ ಖಾಸಗಿ ಏಜೆನ್ಸಿಯಿಂದಾಗುತ್ತಿದ್ದ ಭ್ರಷ್ಟಾಚಾರ ಹಾಗೂ ಸಂಚಾರ ಪೊಲೀಸರ ಕಾರ್ಯವೈಖರಿಯಲ್ಲಿನ ಉಂಟಾಗುತ್ತಿದ್ದ ನ್ಯೂನತೆಗಳನ್ನ ಸರಿಪಡಿಸಲು ಸರ್ಕಾರ ವೈಜ್ಞಾನಿಕ ಹಾಗೂ ಪಾರದರ್ಶಕತೆಯಿಂದ ಟೊಯಿಂಗ್ ಆರಂಭಿಸುವುದಾಗಿ ಹೇಳಿದೆ. ಹೆಚ್ಚು ವಾಹನ ಸಂಚಾರ ದಟ್ಟಣೆಯಾಗುವ ಪ್ರದೇಶಗಳನ್ನ ಗುರುತಿಸಿ ನಿರ್ದಿಷ್ಟ ಕಡೆಗಳಲ್ಲಿ ಟೋಯಿಂಗ್ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಅನಗತ್ಯವಾಗಿ ನಗರದ ಎಲ್ಲ ಕಡೆಗಳಲ್ಲಿಯೂ ಟೊಯಿಂಗ್ ಪದ್ದತಿ ಅನ್ವಯಿಸಿದರೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತೆ ಆಗಲಿದೆ ಎಂದು ಸವಾರರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಮೆಟ್ರೋ ದರ ನಿಗದಿ ಸಮಿತಿ ಸಲ್ಲಿಸಿದ ವರದಿ ಬಹಿರಂಗಪಡಿಸಲು ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Spread the loveಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ತರಿಣಿ ನೇತೃತ್ವದ ದರ ನಿಗದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ