ಬೆಂಗಳೂರು: “ತಮಿಳು ಕನ್ನಡಕ್ಕೆ ಜನ್ಮ ನೀಡಿದೆ” ಎಂಬ ವಿವಾದಿತ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಹಿರಿಯ ನಟ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರಿಗೂ ದೂರು ನೀಡಲಾಗಿದೆ.
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೂ ಮುನ್ನ ಕಮಲ್ ಹಾಸನ್ ಮೇಲೆ ನಿಷೇಧ ಹೇರುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ಚರ್ಚಿಸಲು ಮುಂದಾಗಿದೆ.
ಕಮಲ್ ಹಾಸನ್ ಮೇಲೆ ಸಂಭಾವ್ಯ ನಿಷೇಧ ಹೇರುವ ಕುರಿತು ಚರ್ಚಿಸಲು ಕನ್ನಡ ಚಲನಚಿತ್ರೋದ್ಯಮದ ಎಲ್ಲಾ ಪ್ರಮುಖರೊಂದಿಗೆ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.
“ನಾವು ನಾಳೆ ಸಭೆ ಸೇರಲಿದ್ದೇವೆ. ಮಧ್ಯಾಹ್ನದ ವೇಳೆಗೆ ನಿರ್ಧಾರ ತಿಳಿಸುತ್ತೇವೆ” ಎಂದು ಅವರು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, “ಕನ್ನಡ ಭಾಷೆಗೆ ಸುದೀರ್ಘ ಇತಿಹಾಸವಿದೆ. ಪಾಪ, ಕಮಲ್ ಹಾಸನ್ ಅವರಿಗೆ ಈ ಬಗ್ಗೆ ಗೊತ್ತಿಲ್ಲ” ಎಂದು ಹೇಳಿದ್ದರು.