ಬೆಂಗಳೂರು/ಮಂಡ್ಯ: ರಾಜ್ಯ ರಾಜಕಾರಣದ ಧೀಮಂತ ನಾಯಕ, ಕರುನಾಡು ಕಂಡ ಅದಮ್ಯ ಚೇತನ, ಸೌಮ್ಯ ಸ್ವಭಾವದ ಅಜಾತಶತ್ರು, ದೂರದೃಷ್ಟಿಯ ಕನಸುಗಾರ, ಕಲಾಪ್ರೇಮಿ, ಮಾಜಿ ಸಿಎಂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (SM Krishna) ತಮ್ಮ ಬದುಕಿನ ಪಯಣ ಮುಗಿಸಿದ್ದು ಇಂದು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಸೋಮನಹಳ್ಳಿಯಲ್ಲಿ (Somanahalli) ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಕೃಷ್ಣ ಪಾರ್ಥಿವ ಶರೀರವನ್ನು ಮದ್ದೂರಿಗೆ ಕೊಂಡೊಯ್ಯಲಾಗುತ್ತದೆ. ಮಾರ್ಗಮಧ್ಯೆ ಕೆಂಗೇರಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಕೇಂದ್ರದ ಪರವಾಗಿ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ ಸೇರಿ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಅಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇಂದು ಅಗತ್ಯ ತಯಾರಿಗಳು ನಡೆದಿವೆ. ಡಿಸಿಎಂ ಶಿವಕುಮಾರ್ ಸೇರಿ ಪ್ರಮುಖರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.