ಹೊಸಪೇಟೆ (ವಿಜಯನಗರ): ಕಬ್ಬು ಬೆಳೆಗಾರರಿಗೆ ಶೇ 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು, ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು ಮೊದಲಾದ ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿ.12ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಚಲೋ ನಡೆಸಲು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿದೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಭರತ್‌ರಾಜ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹500 ಎಸ್‌ಎಪಿ ನಿಗದಿಪಡಿಸಬೇಕು, ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕು, ಸಕ್ಕರೆ ಇಳುವರಿ ಪ್ರಕಟಣೆಯಲ್ಲಿ ಮತ್ತು ತೂಕದಲ್ಲಿ ಆಗುವ ಮೋಸ ತಡೆಯಲು ಪ್ರತಿ ಕಾರ್ಖಾನೆ ವ್ಯಾಪ್ತಿಗೆ ಸಮಿತಿ ರಚಿಸಿ, ಆ ಸಮಿತಿಗೆ ಐದು ಮಂದಿ ಕಬ್ಬು ಬೆಳೆಗಾರರನ್ನು ನೇಮಿಸಬೇಕು ಎಂಬ ಬೇಡಿಕೆಯೂ ಇದೆ ಎಂದರು.
‘ಕೃಷಿ ಬೆಲೆ ಆಯೋಗದ ಪ್ರಕಾರ ಒಂದು ಟನ್ ಕಬ್ಬು ಬೆಳೆಯಲು ₹3,580 ಖರ್ಚು ಬರುತ್ತದೆ, ಕೃಷಿ ತಜ್ಞರಾದ ಡಾ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಉತ್ಪಾದನಾ ವೆಚ್ಚದ ಜೊತೆಗೆ ಶೇ 50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ ₹5,370 ಆಗುತ್ತದೆ. ಹೀಗಾಗಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು. ರಾಜ್ಯದಲ್ಲಿರುವ ಎಲ್ಲಾ 76 ಸಕ್ಕರೆ ಕಾರ್ಖಾನೆಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನೋಡಿಕೊಳ್ಳಬೇಕು’ ಎಂದು ಭರತ್‌ರಾಜ್ ಆಗ್ರಹಿಸಿದರು.
ಸಕ್ಕರೆ ಇಳುವರಿ ಪ್ರಮಾಣ ಲೆಕ್ಕಾಚಾರ: 2009ಕ್ಕಿಂತ ಮೊದಲು ಶೇ 8.5 ಸಕ್ಕರೆ ಇಳುವರಿ ಆಧಾರದಲ್ಲಿ ಬೆಂಬಲ ಬೆಲೆ ನಿಗದಿ ಮಾಡುತ್ತಿದ್ದರು. 2010ರಿಂದ 2018ರವರೆಗೆ ಶೇ 9.5ಕ್ಕೆ. 2018 ರಿಂದ 2022ರ ವರೆಗೆ ಶೇ 10ಕ್ಕೆ, 2023 ರಿಂದ ಶೇ 10.25 ಸಕ್ಕರೆ ಇಳುವರಿ ಆಧಾರದಲ್ಲಿ ನ್ಯಾಯಸಮ್ಮತ ಮತ್ತು ಗೌರವಯುತ ದರ (ಎಫ್‌ಆರ್‌ಪಿ) ನಿಗದಿ ಮಾಡುತ್ತಾರೆ. ಶೇಕಡ ಒಂದರಷ್ಟು ಇಳುವರಿ ಹೆಚ್ಚಾದರೆ ₹332 ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಾಗಿ ಕೊಡಬೇಕಾಗುತ್ತದೆ. ಶೇ 8.50 ಆಧಾರದಲ್ಲಿ ಎಫ್‌ಆರ್‌ಪಿ ನಿಗದಿಯಾಗಿದ್ದರೆ 10.25 ಇಳುವರಿ ಕಬ್ಬಿಗೆ ಟನ್ನಿಗೆ ₹3,400 ದರದ ಲೆಕ್ಕದಲ್ಲಿ ₹581 ಸೇರ್ಪಡೆಯಾಗಿ ₹3,981 ನೀಡಬೇಕಾಗಿತ್ತು. ರಾಜ್ಯದಲ್ಲಿ ಶೇ12ರಷ್ಟು ಇಳುವರಿ ಬರುವ ಪ್ರದೇಶಗಳಿವೆ, ಅವುಗಳಿಗೆ ಮತ್ತೆ ₹581 ಸೇರ್ಪಡೆಯಾದರೆ ಒಂದು ಟೆನ್ ಕಬ್ಬಿಗೆ ₹4,562 ಕನಿಷ್ಠ ಬೆಂಬಲ ಬೆಲೆ ನೀಡಬೇಕಾಗುತ್ತದೆ. ಆದರೆ ಇಳುವರಿ ಕಡಿಮೆ ಎಂದು ತೋರಿಸಿ ಸದ್ಯ ಟನ್ನಿಗೆ ₹3,400ರಷ್ಟು ಮಾತ್ರ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.