Breaking News

ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಮರುಪರಿಶೀಲಿಸಬೇಕು: ಮಹಾಂತೇಶ ಕವಟಗಿಮಠ

Spread the love

ಬೆಳಗಾವಿ: ‘ಎಚ್‌.ಕಾಂತರಾಜ ಆಯೋಗ ಕೈಗೊಂಡ 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಅದನ್ನು ಮರುಪರಿಶೀಲಿಸಬೇಕು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‌ಜಾತಿ ಗಣತಿ ಮಾಡಬೇಕಾದರೆ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು.

ಆದರೆ, ಕಾಂತರಾಜ ಆಯೋಗವು ಮನೆ-ಮನೆಗೆ ತೆರಳದೆ, ಸಾಮೂಹಿಕವಾಗಿ ಕೆಲವೇ ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ಕೈಗೊಂಡಿದೆ. ಈ ವರದಿ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದನ್ನು ಜಾರಿಗೊಳಿಸುವ ಮುನ್ನ ಮರುಪರಿಶೀಲನೆ ಮಾಡಬೇಕು ಅಥವಾ ವರದಿ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘2016ರಲ್ಲೇ ಈ ಸಮೀಕ್ಷೆ ಸಿದ್ಧಗೊಂಡಿದೆ. ಆದರೆ, ಮಾಹಿತಿ ಅಸ್ಪಷ್ಟವಾಗಿರುವ ಕಾರಣ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದನ್ನು ಜಾರಿಗೊಳಿಸಲಿಲ್ಲ. ನಂತರ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೂ ಜಾರಿಗೊಳಿಸಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮೀಕ್ಷಾ ವರದಿ ಬಹಿರಂಗಪಡಿಸದೆ ಮತ್ತು ಸಾರ್ವಜನಿಕರ ಅಹವಾಲು ಆಲಿಸದೆ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ’ ಎಂದು ದೂರಿದರು.

‘ಕಾಂಗ್ರೆಸ್‌ ಸರ್ಕಾರ ಪತನವಾದರೂ ಪರವಾಗಿಲ್ಲ. ಆದರೆ, ಈ ಜಾತಿ ಗಣತಿ ವರದಿ ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್‌ನ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ. ‘ಈ ವರದಿ ಸಿದ್ಧಪಡಿಸಲು ₹170 ಕೋಟಿ ಖರ್ಚಾಗಿದೆ. ಇದನ್ನು ಜಾರಿಗೊಳಿಸದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ. ಜಾತಿ ಗಣತಿಯನ್ನು ಯಾವುದೇ ರಾಜಕೀಯ ಪಕ್ಷ, ಯಾವುದೇ ಮಠಾಧೀಶರು ವಿರೋಧಿಸಿಲ್ಲ. ಆದರೆ, 9 ವರ್ಷಗಳ ಹಿಂದಿನ ವರದಿಯನ್ನು ಯಥಾವತ್ತಾಗಿ ಸ್ವೀಕರಿಸಿ ಜಾರಿಗೊಳಿಸುವುದು ಸರಿಯಾದ ಕ್ರಮವಲ್ಲ ಎಂದರು.

‘ಅ.22ರಂದು ಬೆಂಗಳೂರಿನಲ್ಲಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಭೆ ನಡೆಯಲಿದೆ. ಅದರಲ್ಲಿ ರಾಜಕೀಯ ಮುಖಂಡರು, ಹಿರಿಯ ಮಠಾಧೀಶರು ಮತ್ತು ಸಾಮಾಜಿಕ ಚಿಂತಕರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಸಮಗ್ರವಾಗಿ ಚರ್ಚಿಸಿದ ನಂತರ, ಮುಂದಿನ ಹೋರಾಟದ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಜನಗಣತಿ ಮಾಡಲು 2024ರ ಸೆಪ್ಟೆಂಬರ್‌ನಲ್ಲಿ ಒಪ್ಪಿಗೆ ಸೂಚಿಸಿದೆ. ಶೀಘ್ರವೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕಾಗಿ ₹75 ಸಾವಿರ ಕೋಟಿ ಮೀಸಲಿಡಲಾಗಿದೆ. ಆಗ ಜನಗಣತಿಯೊಂದಿಗೆ, ವೈಜ್ಞಾನಿಕವಾಗಿ ಜಾತಿಗಣತಿಯನ್ನೂ ಮಾಡಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ರತ್ನಪ್ರಭಾ ಬೆಲ್ಲದ, ಎಂ.ಬಿ.ಝಿರಲಿ, ಬಸವರಾಜ ರೊಟ್ಟಿ, ಬಿ.ಎಂ.ಚಿಕ್ಕನಗೌಡರ, ಶಂಕರಗೌಡ ಪಾಟೀಲ ಇದ್ದರು.


Spread the love

About Laxminews 24x7

Check Also

ಎಚ್‌ಐವಿ ತಡೆಗಟ್ಟುವಿಕೆ ಜಾಗೃತಿಗಾಗಿ ಮ್ಯಾರಥಾನ್

Spread the love ಬೆಳಗಾವಿ: ಎಚ್‌ಐವಿ/ಏಡ್ಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಹಾಗೂ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ