ಮೂಡಲಗಿ: ‘ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ₹6.92 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗುವುದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಪುರಸಭೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಐಡಿಎಸ್‌ಎಂಟಿ ಯೋಜನೆ ಅಡಿಯಲ್ಲಿ ಮಳಿಗೆಯನ್ನು ನಿರ್ಮಿಸಲಿದ್ದು, ಇದು ಬಹು ಮಹಡಿ ಕಟ್ಟಡವನ್ನು ಹೊಂದಿರಲಿದೆ.
ನೆಲ ಮಾಳಿಗೆಯಲ್ಲಿ (ಬೆಸ್ ಮೆಂಟ್) ವಾಹನಗಳ ಪಾರ್ಕಿಂಗ್, ನೆಲ ಮಹಡಿಯಲ್ಲಿ 51 ಮತ್ತು ಮೊದಲ ಮಹಡಿಯಲ್ಲಿ 17 ಅಂಗಡಿಗಳು ಸೇರಿದಂತೆ ಒಟ್ಟು 68 ಅಂಗಡಿಗಳ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಮೂಡಲಗಿ ಪಟ್ಟಣದ ಅಭಿವೃದ್ಧಿಗಾಗಿ ಅನೇಕ ಹೊಸ ಹೊಸ ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತಿದೆ. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರವು ಯಾವುದೇ ತೆರನಾದ ಅನುದಾನ ನೀಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಿಧಾನ ಗತಿಯಲ್ಲಿ ನಡೆಯುತ್ತಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.