ಬೆಳಗಾವಿ: ‘ಇಲ್ಲಿನ ಭಾವುರಾವ್ ಕಾಕತಕರ ಕಾಲೇಜಿನಲ್ಲಿ ರೋಟರಿ ಕ್ಲಬ್ ಬೆಲಗಮ್-ವೇಣುಗ್ರಾಮ ಹಾಗೂ ಬೆಂಗಳೂರಿನ ಸ್ಪೆಕ್ಟ್ರಂ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಸಹಯೋಗದಲ್ಲಿ ಜೂನ್ 22ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಎರಡನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಕ್ಲಬ್ ಅಧ್ಯಕ್ಷ ಸಂಜೀವ್ ದೇಶಪಾಂಡೆ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಭಾಗದ ಉದ್ಯೋಗಕಾಂಕ್ಷಿಗಳಿಗೆ ನೆರವಾಗುವ ದೃಷ್ಟಿಯಿಂದ ಆಯೋಜಿಸಿದ ಮೇಳದಲ್ಲಿ 50ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಇದರಲ್ಲಿ ಕಾರ್ಪೋರೇಟ್, ಎಫ್‌ಎಂಸಿಜಿ, ಆಟೊಮೊಬೈಲ್ ಕಂಪನಿಗಳು, ಸ್ಟಾರ್ಟಪ್‌ಗಳು, ಫಾರ್ಮಾ, ಹಾಸ್ಪಿಟಾಲಿಟಿ, ಟೆಕ್ಸ್‌ಟೈಲ್, ರಿಟೇಲ್, ಬ್ಯಾಂಕ್, ಫೈನಾನ್ಷಿಯಲ್ ಇನ್‌ಸ್ಟಿಟ್ಯೂಷನ್ಸ್ ಮತ್ತು ಟ್ರಾವೆಲ್ ಆಯಂಡ್ ಟೂರಿಸಂ ಫರ್ಮ್‌ಗಳು ಸೇರಿವೆ. 4 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದರು.
ರೋಟರಿಯನ್ ಡಿ.ಬಿ.ಪಾಟೀಲ, ‘ಕಳೆದ ವರ್ಷ ನಡೆದ ಉದ್ಯೋಗ ಮೇಳದಲ್ಲಿ 600 ಮಂದಿಗೆ ಉದ್ಯೋಗ ಸಿಕ್ಕಿತ್ತು. ಈ ಬಾರಿ ಹೆಚ್ಚಿನ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದ್ದು, ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಕೋರ್ಸ್‌ವರೆಗೆ ವ್ಯಾಸಂಗ ಮಾಡಿದವರು ಭಾಗವಹಿಸಬಹುದು. ಮಾಹಿತಿಗೆ ಮೊ.ಸಂ.8105308804, 9663381838 ಸಂಪರ್ಕಿಸಬಹುದು’ ಎಂದು ತಿಳಿಸಿದರು.
ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಮುರಗುಡೆ ಇದ್ದರು.