ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ರಾಜ್ಯಸಭೆ ಟಿಕೇಟ್ ವಿಚಾರವಾಗಿ ನಡೆದ ಬೆಳಗಾವಿ ಜಿಲ್ಲೆಯ ನಾಯಕರ ಗುದ್ದಾಟ ರಾಜ್ಯ ರಾಜಕೀಯವನ್ನೆ ತಲ್ಲಣಗೊಳಿಸುವ ಮಟ್ಟಿಗೆ ಬಂದಿತ್ತು. ಅಂತಿಮವಾಗಿ ಇಬ್ಬರ ಜಗಳಗಳಲ್ಲಿ ಮೂರನೇಯವರು ಟಿಕೆಟ್ ಗಿಟ್ಟಿಸಿಕೊಂಡಿದ್ದು ಆಯಿತು.
ಈಗ ರಾಜ್ಯಸಭೆ ಟಿಕೇಟ್ ವಂಚಿತರಾಗಿರುವ ರಮೇಶ ಕತ್ತಿ ಮತ್ತು ಅವರಿಗಾಗಿ ತೀವ್ರ ಲಾಬಿ ನಡೆಸಿದ್ದ ಸಹೋದರ ಉಮೇಶ ಕತ್ತಿ ಅವರಿಗೆ ಇಂದು ನಳೀನ್ ಕುಮಾರ್ ಕಟೀಲ್ ಮತ್ತು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಮೇಲ್ಮನೆ ಸದಸ್ಯ ಮಹಾಂತೇಶ ಕವಟಗಿಮಠ ಅವರು ಭೇಟಿಯಾಗಿ ಮುನಿಸು ಶಮನಗೊಳಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಮಾತನಾಡಿದ ರಮೇಶ ಜಾರಕಿಹೊಳಿ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ಬಳಿಕ ಉಮೇಶ ಕತ್ತಿ ಅವರಿಗೆ ಭೇಟಿಯಾಗುವುದಾಗಿ ತಿಳಿಸಿದ್ದರು. ಒಟ್ಟಾರೆ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಉಮೇಶ ಕತ್ತಿ ಮತ್ತು ರಮೇಶ ಕತ್ತಿ ಅವರ ಮುನಿಸು ಎಷ್ಟರ ಮಟ್ಟಿಗೆ ಶಮನವಾಗಿದೆ ಎಂಬುದು ಕಾದು ನೋಡಬೇಕಾಗಿದೆ. ಅಥವಾ ಬೆಳಗಾವಿ ಜಿಲ್ಲಾ ಮತ್ತೊಂದು ರಾಜಕೀಯ ಪ್ರಹಸಣಕ್ಕೆ ಕಾರಣವಾಗಲಿದೆ ಎಂಬುದನ್ನು ಕೂಡ ಕಾದು ನೋಡಬೇಕಾಗಿದೆ.