ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರವೂ, ಚಿಕ್ಕೋಡಿಯಲ್ಲಿ ಗೆದ್ದ ನಂತರವೂ ಕಾಂಗ್ರೆಸ್ ಆಂತರಿಕ ಬೇಗುದಿ ತಣ್ಣಗಾಗಿಲ್ಲ. ಇದೀಗ ಬಿಜೆಪಿಯಿಂದ ಬಂದು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಲಕ್ಷ್ಮಣ್ ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿ, ಜೂನ್ 7: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿಗೆ ಗೆಲುವಾದರೂ ಪಕ್ಷದ ಒಳಬೇಗುದಿ ಹೆಚ್ಚಾಗಿದೆ. ಇದೀಗ ಶಾಸಕ ಲಕ್ಷ್ಮಣ್ (Laxman Savadi) ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಬಿಜೆಪಿಯಿಂದ ಪಕ್ಷಕ್ಕೆ ಬಂದವರಿಂದ ಕೊನೆಯ ವರೆಗೂ ಸಮಸ್ಯೆಯಾಯಿತು ಎಂದಿದ್ದಾರೆ. ಅಥಣಿಯಲ್ಲಿ ಮಾತನಾಡಿದ ಅವರು, ಈಗ ಕಾಂಗ್ರೆಸ್ಗೆ ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಮುಖಂಡರು ಬದಲಾದರೂ ಕಾರ್ಯಕರ್ತರು ಬದಲಾಗಲಿಲ್ಲ. ಅಥಣಿಯಲ್ಲಿ 20-30 ಸಾವಿರ ಲೀಡ್ ಸಿಗುತ್ತೆ ಅಂದುಕೊಂಡಿದ್ದೆವು. ಆದರೆ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂದು ಹೇಳಿದ್ದಾರೆ.
ಅವರು ಏಕೆ ಹಾಗೆ ಮಾಡಿದರು, ಅವರ ಪ್ಲ್ಯಾನ್ ಏನಿತ್ತು ನೋಡೋಣ. ಅವರು ಸೀರಿಯಲ್ನಲ್ಲಿ ಬರುವಂತೆ ನಿಧಾನ ಆಗುತ್ತಾ ಹೋದರು. ಸರಿಯಾಗಿ ಪ್ರಚಾರ ಮಾಡಲಿಲ್ಲ, ಇದನ್ನು ನಾವು ನೋಡಿದ್ದೇವೆ. ವಿಶ್ವಾಸ ಇಟ್ಟು ಕೊಟ್ಟಿದ್ದೆವು, ಬಹಳ ನಂಬಿದ್ದೆವು. ಆದರೆ ಬಹಳ ಮೋಸ ಮಾಡಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೆ ಹತ್ತಿರ ಬರಲು ಅವರಿಗೆ ಒಳ್ಳೆಯ ಅವಕಾಶ ಇತ್ತು. ಆದರೆ, ಬಿಜೆಪಿಯಿಂದ ಪಕ್ಷಕ್ಕೆ ಬಂದವರು ಕೊನೆಯವರೆಗೆ ಸಮಸ್ಯೆ ಮಾಡಿದರು ಎಂದು ಲಕ್ಷ್ಮಣ್ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.