ಬೆಂಗಳೂರು, ಮೇ 31- ವಾಲ್ಮೀಕಿ ಅಭಿವೃದ್ಧಿ ನಿಗಮದ ಬೃಹತ್ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡವನ್ನು ತಪ್ಪಿಸಲು ನಾನಾ ರೀತಿಯ ಸರ್ಕಸ್‌ಗಳು ನಡೆಯುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ 162 ಕೋಟಿ ರೂ.ಗಳ ಹಗರಣವನ್ನು ಕೆಣಕಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ.ಗಳು ನಿಗಮದ ಉಪಖಾತೆಗಳಿಗೆ ವರ್ಗಾವಣೆಯಾಗಿರುವಂತೆ ಅಲ್ಲಿಂದ ಬೇರೆ ಬೇರೆ ಖಾತೆಗಳಿಗೂ ಸಂದಾಯವಾಗಿದೆ ಎಂಬ ಆರೋಪಗಳಿದ್ದು, ಸಂಪುಟದಲ್ಲಿ ಬಹಳಷ್ಟು ಮಂದಿ ಈ ಹಗರಣದ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ.
ಬಿಜೆಪಿ ಸಚಿವ ನಾಗೇಂದ್ರ ಅವರ ತಲೆದಂಡಕ್ಕೆ ಪಟ್ಟು ಹಿಡಿದು ಜೂನ್ 6 ರವರೆಗೂ ಗಡುವು ನೀಡಿದೆ. ಕಾಂಗ್ರೆಸ್‌ನ ಒಂದು ಪಾಳಯ ಸಚಿವ ನಾಗೇಂದ್ರ ಅವರ ತಲೆದಂಡವಾಗಲಿ ಎಂದು ಹೇಳುತ್ತಿದೆ. ಹೈಕಮಾಂಡ್ ಮಟ್ಟದಲ್ಲೂ ಇದಕ್ಕೆ ಸಕಾರಾತ್ಮಕ ಸೂಚನೆಗಳು ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಪ್ರತ್ಯೇಕ ಸಭೆ ನಡೆಸಿ ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಏಕಾಏಕಿ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದುಕೊಂಡರೆ ಸರ್ಕಾರ ಮತ್ತಷ್ಟು ಮುಜುಗರಕ್ಕೊಳಗಾಗಬೇಕಾಗುತ್ತದೆ, ಹಗರಣವನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಗೊಂದಲಗಳು ಕಾಂಗ್ರೆಸ್ಸಿಗರನ್ನು ಕಾಡುತ್ತಿವೆ.