ಚಾಮರಾಜನಗರ, ಮೇ, 12: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸುರಿದ ಮಳೆಗೆ ಜನರು ಹರ್ಷಗೊಂಡಿದ್ದರೆ, ಬಾಳೆ ಬೆಳೆಗಾರರು ಮಾತ್ರ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶನಿವಾರ (ಮೇ 11) ಸುರಿದ ಬಿರುಗಾಳಿ ಮಳೆಗೆ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ತಣ್ಣೀರೆರಚಿದಂತಾಗಿದೆ.
ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮೂಡ್ಲು, ಉತ್ತುವಳ್ಳಿ, ದೊಡ್ಡಮೋಳೆ, ಡೊಳ್ಳಿಪುರ ಸೇರಿದಂತೆ ಹತ್ತಾರು ಊರುಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಹೆಕ್ಟೇರ್ ಬಾಳೆ ನೆಲಕಚ್ಚಿದ್ದು, ಇನ್ನು 15 ದಿನಗಳಲ್ಲಿ ಎಲ್ಲವೂ ಬಂಪರ್ ಲಾಭ ತಂದುಕೊಡುತ್ತಿದ್ದ ಫಸಲಾಗಿತ್ತು ಎನ್ನುವ ಭರವಸೆಯಲ್ಲಿ ರೈತರಿದ್ದರು.
ಸದ್ಯ, ಮಾರುಕಟ್ಟೆಯಲ್ಲಿ ಕೆ.ಜಿ. ನೇಂದ್ರ ಬಾಳೆಗೆ 40 ರೂಪಾಯಿ, ಏಲಕ್ಕಿ ಬಾಳೆಗೆ 45, ಚಂದ್ರ ಬಾಳೆಗೆ 35 ರೂಪಾಯಿ ದರವಿದ್ದು, ಏನಿಲ್ಲ ಎಂದರೂ 2 ಹೆಕ್ಟೇರ್‌ನಲ್ಲಿ ಬೆಳೆದ ರೈತ 12-15 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದ. ಆದರೆ, ಬೆಲೆ ಇದ್ದ ಹೊತ್ತಲ್ಲೇ ಗಾಳಿಗೆ ಫಸಲು ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.
Laxmi News 24×7