ಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ತೀರ್ಪು ಅನ್ನು ದ್ವಿಸದಸ್ಯ ಪೀಠ ಕಾಯ್ದಿರಿಸಿದೆ.
ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ತೆರವುಗೊಳಿಸುವಂತೆ ರಾಜ್ಯ ಸರ್ಕಾರವು ದ್ವಿದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ಗೀತಾ ಕೆ.ಬಿ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಈ ಕುರಿತು ಇಂದು ವಿಚಾರಣೆ ನಡೆಯಿತು. ಸುಮಾರು ಒಂದು ಗಂಟೆ ಕಾಲ ನಡೆದ ವಾದ ಪ್ರತಿವಾದದ ಬಳಿಕ ತೀರ್ಪು ಕಾಯ್ದಿರಿಸಿ ಪೀಠ ಆದೇಶಿಸಿದೆ.
ವಾದ ಆರಂಭಿಸಿದ ಸರ್ಕಾರದ ಪರ ವಕೀಲರು, ಅರ್ಜಿ ಸಲ್ಲಿಸಿದವರ ಪೈಕಿ ಇಬ್ಬರು ಸಂಸ್ಥೆಗಳನ್ನು ಹೊಂದಿದ್ದಾರೆ. ಅವರು ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಹೀಗಾಗಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ವಕೀಲರು ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದರು.
10 ಜನರು ಸೇರಿದರೆ ಅನುಮತಿ ಬೇಕಾ? ಅದರ ಅವಶ್ಯಕತೆ ಇದೆಯಾ? ಯಾರೋ ಕೆಲವರು ಪಾರ್ಕ್‌ಗಳಲ್ಲಿ ಜೊತೆಯಾಗಿ ಹೋಗುತ್ತಾರೆ. ಅದಕ್ಕೂ ಕೂಡ ಅನುಮತಿ ಬೇಕಾ? ಎಂದು ಸರ್ಕಾರದ ಪರ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಸರ್ಕಾರಿ ರಸ್ತೆ ಇರುವುದು ಸಾರ್ವಜನಿಕರ ಓಡಾಟಕ್ಕೆ. ಹೀಗಾಗಿ ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು. ಖಾಸಗಿಯವರು ಕಾರ್ಯಕ್ರಮ ಮಾಡಲು ಬೇರೆ ಕಡೆ ಸ್ಥಳ ಬಾಡಿಗೆ ಪಡೆದು ಕಾರ್ಯಕ್ರಮ ಮಾಡಬಹುದು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಇದರಲ್ಲಿ ಕಾಯ್ದೆ 19ಎ ಉಲ್ಲಂಘನೆಯಾಗಲ್ಲ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದರು.
Laxmi News 24×7