ಬೆಂಗಳೂರು: ಸಂಸದ ಬಿ.ವೈ. ರಾಘವೇಂದ್ರ ಅವರು ಹಿಟ್ ಅಂಡ್ ರನ್ ನಾಯಕರ ಪಟ್ಟಿಗೆ ಸೇರುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ ಎಂದಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಿ ಆರೋಪ ಮಾಡಲಿ. ಹಿಟ್ ಅಂಡ್ ರನ್ ಮಾಡುವ ಒಂದಷ್ಟು ನಾಯಕರಿದ್ದಾರಲ್ಲಾ ಅವರಂತೆ ರಾಘವೇಂದ್ರ ಅವರು ಆಗುವುದು ಬೇಡ. ರಾಘವೇಂದ್ರ ಅವರ ಹೆಸರು ಸುಳ್ಳಿಗೆ ಮತ್ತೊಂದು ಉದಾಹರಣೆಯಂತಾಗುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಜಾಗರೂಕತೆಯಿಂದ ಪಟಾಕಿ ಸಿಡಿಸಿ: ಇದೇ ವೇಳೆ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಆದಷ್ಟು ಜಾಗರೂಕತೆಯಿಂದ ಪಟಾಕಿ ಸಿಡಿಸಬೇಕು. ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು. ಈಗಾಗಲೇ ಸಣ್ಣಪುಟ್ಟ ಅವಘಡಗಳ ಸುದ್ದಿ ಕೇಳಿಬರುತ್ತಿದೆ. ಯಾವುದೇ ಸಿಡಿಮದ್ದುಗಳನ್ನು ಸಿಡಿಸುವ ಸಂದರ್ಭದಲ್ಲಿಯೂ ಎಚ್ಚರವಿರಲಿ. ಈ ವರ್ಷ ರಾಜ್ಯದಲ್ಲಿ ಉತ್ತಮವಾಗಿ ಮಳೆ ಬಂದಿದೆ. ಸಮೃದ್ಧಿಯಾಗಿ ಬೆಳೆ ಬಂದಿದೆ. ಪ್ರತಿವರ್ಷವೂ ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು: ಬಿಹಾರ ಚುನಾವಣೆಗೆ ಕಲೆಕ್ಷನ್ ಮಾಡ್ತಿದ್ದಾರೆ ಎಂಬ ಬಿ.ವೈ. ರಾಘವೇಂದ್ರ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಅವರು ಅವರ ಇತಿಹಾಸದಲ್ಲೆ ವೀಕ್ ಇದ್ದಾರೆ. ಅವರ ತಂದೆ ಯಡಿಯೂರಪ್ಪ ಅವರು ದಿವಂಗತ ಅನಂತ್ ಕುಮಾರ್ ಜೊತೆ ವೇದಿಕೆ ಹಂಚಿಕೊಂಡಾಗ, ಕಪ್ಪ ಕೊಟ್ಟ ಮೇಲೆ ಸಿಎಂ ಮಾಡಿದ್ದಾರೆ ಎಂದು ಬಿಎಸ್ವೈ ಹೇಳಿದ್ರು. ಅದು ಸರಿಯಾಗಿ ಹೈಕಮಾಂಡ್ಗೆ ತಲುಪಿರಲಿಲ್ಲ ಅನಿಸುತ್ತೆ. ಸದಾನಂದಗೌಡ್ರು, ಜಗದೀಶ್ ಶೆಟ್ಟರ್ ಅವರನ್ನ ಸಿಎಂ ಮಾಡಿದ್ರು. ಅವರ ಪದ್ದತಿ ಹಾಗೆ ಇರಬೇಕು. ಬಿಹಾರಕ್ಕೆ ದುಡ್ಡು ಕಳಿಸಿದ್ದರೆ ಅದರ ದಾಖಲೆ ಕೊಡಿ. ಅಪರೇಷನ್ ಕಮಲ ಆಯ್ತಾಲ್ಲಾ, ಎಲ್ಲಿಂದ ಬಂತು ದುಡ್ಡು?. ಅಪರೇಷನ್ ಕಮಲದಿಂದ ಇಡೀ ದೇಶಕ್ಕೆ ಮಾದರಿಯಾದರು ಎಂದು ಟೀಕಿಸಿದರು.
ಇದೇ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಎಸ್. ಮಧು ಬಂಗಾರಪ್ಪ, ಚುನಾವಣೆಯಲ್ಲಿ ರಾಘವೇಂದ್ರ ಹೇಗೆ ಗೆದ್ರು ಅಂತ ಗೂತ್ತಾ? ಬಂಗಾರಪ್ಪನವರ ಮುಂದೆ ಇವರ ಸಾಧನೆ ಏನೂ ಇಲ್ಲ. ಚುನಾವಣೆಯಲ್ಲಿ ಪೊಲೀಸ್ ಜೀಪ್ ಹಾಗೂ ಆಂಬ್ಯುಲೆನ್ಸ್ನಲ್ಲಿ ಹಣ ತರಿಸಿದರು. ಅವರು ಮುನ್ಸಿಪಾಲಿಟಿಯಿಂದ ಬಂದವರು. ಹಾಗಾಗಿ ಆ ಯೋಚನೆ, ಆ ಚಿಂತನೆ ಅವರಿಗೆ ಬಾರದೇ ಇನ್ನೇನು ಎಂದು ಪ್ರಶ್ನಿಸಿದರು.