ವಿಜಯಪುರ :ಮನೆ ಕುಸಿದು ನಾಲ್ವರಿಗೆ ಗಂಭೀರ ಗಾಯ; ಮಾಜಿ ಶಾಸಕ ನಡಹಳ್ಳಿ ಸಾಂತ್ವನ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅರೇಮುರಾಳ ಗ್ರಾಮದಲ್ಲಿ ನಿರಂತರ ಮಳೆಗೆ ಮನೆ ಕುಸಿದು ನಾಲ್ವರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ, ರುಶಾಂಬಂಡಿವಡ್ಡರ ಗಾಯಗೊಂಡವರು. ಮನೆಯಲ್ಲಿದ್ದ ಬಹುತೇಕ ಎಲ್ಲ ಸಾಮಗ್ರಿಗಳು, ದಿನಬಳಕೆ ವಸ್ತುಗಳು ನಾಶವಾಗಿವೆ. ಮಧ್ಯರಾತ್ರಿಯೇ ಘಟನೆ ನಡೆದಿದ್ದರೂ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಯಾರೊಬ್ಬರೂ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಸ್ಥಳಕ್ಕೆ ಧಾವಿಸಿ,ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಪಡಿತರ ವಿತರಿಸಿದರು. ಅಧಿಕಾರಿಗಳ ಬೇಜವಾಬ್ಧಾರಿತನಕ್ಕೆ ಕಿಡಿ ಕಾರಿದರು.