ಬೆಂಗಳೂರು: ಹಿಂಸಾಚಾರಪೀಡಿತ ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ(ಸಿಎಸ್) ಶಾಲಿನಿ ರಜನೀಶ್ ಅವರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೇಪಾಳಕ್ಕೆ ಪ್ರವಾಸ ಹೋಗಿರುವ 39 ಮಂದಿ ಕನ್ನಡಿಗರು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಮಾಹಿತಿ ಇದೆ.
ಸಾಮಾಜಿಕ ಜಾಲತಾಣಗಳ ನಿಷೇಧ, ಭ್ರಷ್ಟಾಚಾರ ಮತ್ತು ಹಗರಣಗಳ ವಿರುದ್ಧ ನೇಪಾಳದಲ್ಲಿ ಯುವಜನರು ಎರಡು ದಿನದಿಂದ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದ್ದು, ಪ್ರಕ್ಷುಬ್ಧ ವಾತಾವರಣವಿದೆ.