ಮಂಗಳೂರು (ದಕ್ಷಿಣ ಕನ್ನಡ): ಭಾರತದಲ್ಲಿ ಹಬ್ಬಗಳ ಋತು ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಸೃಷ್ಟಿಸುವ ಸಮಯವಾಗಿದೆ. 2025ರ ಸೆಪ್ಟೆಂಬರ್ – ಅಕ್ಟೋಬರ್ನಲ್ಲಿ ನವರಾತ್ರಿ, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳು ಬರುತ್ತಿದ್ದಂತೆ, ಚಿನ್ನದ ದರಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಇದು ಹಣತೆಗಳ ಬೆಳಕವನ್ನು ತುಸು ಮಸುಕಾಗುವಂತೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ ಸುಮಾರು ರೂ. 1,20,600 ಗೆ ತಲುಪಿದ್ದು, ಬೆಳ್ಳಿಯ ದರ ಕೆಜಿಗೆ ರೂ. 1,63,800 ಆಗಿದೆ.
ಚಿನ್ನದ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು : ಚಿನ್ನದ ದರಗಳ ಏರಿಕೆಯು ದೇಶೀಯ ಹಬ್ಬಗಳಲ್ಲಿ ಬರುವ ಬೇಡಿಕೆಯೊಂದಿಗೆ ಜಾಗತಿಕ ಅಂಶಗಳಿಂದಲೂ ಪ್ರೇರಿತವಾಗಿದೆ. ಭಾರತದಲ್ಲಿ ನವರಾತ್ರಿ ಮತ್ತು ದೀಪಾವಳಿಯಂತಹ ಹಬ್ಬಗಳು ಚಿನ್ನದ ಆಭರಣಗಳ ಖರೀದಿಯನ್ನು ಹೆಚ್ಚಿಸುತ್ತವೆ. ಇದು ಸಾಂಸ್ಕೃತಿಕವಾಗಿ ಶುಭ ಎಂದು ಪರಿಗಣಿಸಲ್ಪಡುತ್ತದೆ. 2025ರಲ್ಲಿ ಈ ಋತುವಿನ ಆರಂಭದೊಂದಿಗೆ ಚಿನ್ನದ ಖರೀದಿ ಹೆಚ್ಚಾಗಿದ್ದು, ಬೆಲೆಗಳನ್ನು ಏರಿಸಿದೆ. ಜಾಗತಿಕವಾಗಿ ಅಸ್ಥಿರತೆಯಂತಹ ಆತಂಕಗಳು ಚಿನ್ನವನ್ನು ಸುರಕ್ಷಿತ ಕಾರಣಕ್ಕೆ ಹೂಡಿಕೆಯಾಗಿ ಮಾಡಿವೆ. ವಿವಿಧ ದೇಶಗಳು ಚಿನ್ನವನ್ನು ರಿಸರ್ವ್ ಆಗಿಡಲು ಖರೀದಿಸುತ್ತಿದ್ದು, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.