ಜಾತಿಯ ಅಸಹನೆ ಇನ್ನೂ ಅದೆಷ್ಟರ ಮಟ್ಟಿಗೆ ಸಮಾಜದಲ್ಲಿ ಉಸಿರಾಡುತ್ತಿದೆ ಎನ್ನುವುದಕ್ಕೆ ನಿನ್ನೆ ಜರುಗಿದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಸಮಯದಲ್ಲಿ ಮಾಜಿ ಸಂಸದ #ರಮೇಶ_ಕತ್ತಿ ಆಡಿದ ದಾಷ್ಟ್ಯದ ಮಾತುಗಳು ಸಾಕ್ಷೀಕರಿಸುತ್ತವೆ. ಇದಕ್ಕೆ ಅವರ ಹುಟ್ಟಿನ ಮೂಲವಾಗಿರುವ ಜಮೀನ್ದಾರಿ ಪಾಳೆಪಟ್ಟು ನೂರಕ್ಕೆ ನೂರರಷ್ಟು ಕಾರಣ ಎಂಬುದು ಸಮಾಜಶಾಸ್ತ್ರೀಯ ಅಧ್ಯಯನ ಮಾಡಿರುವ ನನ್ನಂಥವರಿಗೆ ತುಂಬಾ ಬೇಗ ಅರ್ಥವಾಗುತ್ತದೆ!
ಜೀತಪದ್ದತಿ, ಊಳಿಗಮಾನ್ಯ ವ್ಯವಸ್ಥೆ ಮತ್ತು ಜಾತಿ ತಾರತಮ್ಯವನ್ನು ಶತಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ದೊಡ್ಡ ಸಮೂಹವೊಂದರ ಪ್ರತಿನಿಧಿಯಾಗಿಯೇ ರಮೇಶ ಕತ್ತಿ, ಹೀಗೆ ಜಾತಿ ನಿಂದನೆಯಂತಹ ಹೀನ ಕೃತ್ಯ ಎಸಗಿದ್ದಾರೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ!
ಬೆಳಗಾವಿ ಜಿಲ್ಲೆಯ ಸಹಕಾರಿ ರಂಗದ ಚುನಾವಣೆಯನ್ನು ಚುನಾವಣೆ ಆಗಿ ನೋಡದೇ, ಅದನ್ನೊಂದು ಜಾತಿ ರಾಜಕಾರಣದ ಒಡ್ಡೋಲಗ ಮಾಡಿ ಆ ಮೂಲಕ ಚುನಾವಣೆ ಗೆಲ್ಲಲು ರಮೇಶ ಕತ್ತಿ ಮತ್ತವರ ಬಳಗ ರಚಿಸಿದ್ದ ಜಾತಿ ಸಮೀಕರಣದ ಎಲ್ಲಾ ಲೆಕ್ಕಾಚಾರಗಳು, ಸಚಿವ Satish Jarkiholi ಮತ್ತು ಸಹೋದರರ ಕಾರ್ಯತಂತ್ರಗಳ ಕಾರಣಕ್ಕೆ ಮುಗುಚಿಬಿದ್ದಿದ್ದು ವಾಸ್ತವ. ಹಾಗಂತ ಪ್ರತಿಸ್ಪರ್ಧಿ ಪಾಳೆಯದ ನಾಯಕತ್ವ ವಹಿಸಿಕೊಂಡವರ ‘ಜಾತಿ’ ಕೇಂದ್ರಿಕರಿಸಿ ತೆಗಳುವುದು ಜಾತಿ ನಿಂದನೆಯಲ್ಲದೇ ಬೇರೆನಲ್ಲ!
1996 ರಿಂದಲೂ ಸಹಕಾರಿ ರಂಗದಲ್ಲಿದ್ದು, ಒಮ್ಮೆ ಲೋಕಸಭೆ ಸದಸ್ಯನಾಗಿ ಅಯ್ಕೆಯಾಗಿದ್ದಾಗಲೂ ಕೂಡ ರಮೇಶ ಕತ್ತಿಯ ಆಂಗಿಕ ಭಾಷೆ ಇಂದಿಗೂ ಗತಕಾಲದ ಜಮೀನ್ದಾರಿ ಪಳೆಯುಳಿಕೆಯ ಪ್ರತಿಧ್ವನಿಯಂತೆಯೇ ಭಾಸವಾಗುತ್ತಿದೆ. ಅದರ ಬೆಂಬಲದಲ್ಲಿಯೇ ಬಹುಶಃ ರಮೇಶ ಕತ್ತಿ ಹೀಗೆ ‘ಜಾತಿ’ ನಿಂದನೆಯಂತಹ ಅನಾಗರಿಕ ವರ್ತನೆಗೆ ಕಾರಣ ಕೂಡ ಆಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ!
ಚುನಾವಣೆಗಳ ಸೋಲು ಗೆಲುವುಗಳು ಎಂದಿಗೂ ಶಾಶ್ವತವಲ್ಲ. ಇವತ್ತು ಗೆಲವು ಅವರದ್ದಾದರೇ, ನಾಳೆ ಇನ್ನೊಬ್ಬರದ್ದು. ಹಾಗಂತ ಗೆದ್ದವರ ಬಳಗದ ನಾಯಕತ್ವ ವಹಿಸಿಕೊಂಡವರ ‘ಜಾತಿ’ ಹೆಸರಿನಲ್ಲಿ ಬಾಯಿ ಚಪಲ ತೀರಿಸಿಕೊಳ್ಳುವುದನ್ನು ನಮ್ಮ ‘ಸಂವಿಧಾನಿಕ ಮೌಲ್ಯಗಳು’ ಎಂದಿಗೂ ಒಪ್ಪಲಾರವು.
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಂತಹ ಸಾಂವಿಧಾನಿಕ ಸ್ಥಾನದ ಮೇಲೆ ಕೂತಿರುವ ವ್ಯಕ್ತಿಯ ಮೇಲೆಯೇ ‘ಶೂ’ ಎಸೆಯುವಂತಹ ಜಾತಿಯ ಅಸಹನೆಗೂ, ಮಾಜಿ ಸಂಸದ ರಮೇಶ ಕತ್ತಿ ಆಡಿರುವ ಮಾತುಗಳ ಹಿಂದಿನ ಮರ್ಮ ಖಂಡಿತವಾಗಿಯೂ ಬೇರೆಯಂತೂ ಅಲ್ಲ. ಎರಡೂ ಮನಸ್ಥಿತಿಗಳು ತಕ್ಕಡಿಯಲ್ಲಿ ಒಂದೇ ಸಮನಾಗಿ ತೂಗುತ್ತವೆ!
ಹೀಗಾಗಿ ಪದೇ ಪದೇ ಮೀಸೆ ತಿರುವಿಕೊಂಡು ತಿರುಗಾಡುತ್ತಿದ್ದ ರಮೇಶ ಕತ್ತಿ ವಿರುದ್ದ, ಈಗ ಈ ನೆಲದ ಕಾನೂನು ತನ್ನ ಮೀಸೆ ತಿರುವುಬೇಕಷ್ಟೇ! ಇಲ್ಲದಿದ್ದರೆ ಯಾರ ಮೀಸೆ ಯಾವಾಗ, ಹೇಗೆ ತಿರುವಬೇಕು ಎಂಬುದನ್ನು ಡಾ.ಬಾಬಾ ಸಾಹೇಬರು ನಮಗೆ ಕಲಿಸಿಕೊಟ್ಟು ಹೋಗಿದ್ದಾರೆ!
-ಇರ್ಫಾನ್ ಮುದಗಲ್