ಹಾವೇರಿ: ಕನ್ನಡದ ಕಟ್ಟಾಳು, ಕರ್ನಾಟಕ ಏಕೀಕರಣದ ರೂವಾರಿ, ನೇರ, ನಿಷ್ಠುರ ನುಡಿಗಳಿಗೆ ಮತ್ತೊಂದು ಹೆಸರೇ ಪಾಟೀಲ ಪುಟ್ಟಪ್ಪ. ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಪಾಪು’ ಎಂದೇ ಖ್ಯಾತರಾಗಿದ್ದ ಇವರು, ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಕನ್ನಡ ಪರ ಹೋರಾಟಗಳ ನೇತೃತ್ವ ವಹಿಸಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು.
ಇಂತಹ ವ್ಯಕ್ತಿತ್ವದ ಪಾಟೀಲ ಪುಟ್ಟಪ್ಪನವರ ಜನ್ಮಭೂಮಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ. ಇಲ್ಲಿಯೇ ಬಾಲ್ಯ ಕಳೆದ ಪುಟ್ಟಪ್ಪ ನಂತರ ಹುಬ್ಬಳ್ಳಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಹಲವು ವಲಯಗಳಲ್ಲಿ ಸೈ ಎನಿಸಿಕೊಂಡಿದ್ದು ಇತಿಹಾಸ.
ಆದರೆ, ಪುಟ್ಟಪ್ಪನವರ ನಿಧನದ ಬಳಿಕ ಅವರ ಸಮಾಧಿಯನ್ನು ಇದೇ ಹಲಗೇರಿಯ ತೆಂಗಿನ ತೋಟದಲ್ಲಿ ಮಾಡಲಾಗಿದೆ. ಸಮಾಧಿಯ ಪಕ್ಕದಲ್ಲಿ ಗ್ರಂಥಾಲಯ ಸ್ಥಾಪಿಸಬೇಕು ಎನ್ನುವುದು ಪಾಪು ಅವರ ಆಸೆಯಾಗಿತ್ತು. ಆದರೆ, ಅವರು ನಿಧನರಾಗಿ ಹತ್ತಿರ ಐದು ವರ್ಷವಾಗುತ್ತಾ ಬಂದರೂ ಸಮಾಧಿಗೆ ಯಾವುದೇ ಕಾಯಕಲ್ಪ ಒದಗಿಸಿಲ್ಲ.
ಹೀಗಾಗಿ, ತೆಂಗಿನ ತೋಟದಲ್ಲಿರುವ ಅವರ ಸಮಾಧಿ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಬ್ಯಾಡಗಿಯ ಅವರ ಅಭಿಮಾನಿಯೊಬ್ಬ ಸಿಮೆಂಟ್ ಇಟ್ಟಿಗೆಗಳಿಂದ ಸಮಾಧಿಗೆ ಮೊಣಕಾಲೆತ್ತರದ ಕಟ್ಟೆ ಕಟ್ಟಿದ್ದಾರೆ. ಆ ಕಟ್ಟೆಯಲ್ಲಿ ಇದೀಗ ಪೊದೆ ಬೆಳೆದಿದ್ದು ಸಮಾಧಿಯನ್ನು ಹುಡುಕುವ ಪರಿಸ್ಥಿತಿ ಇದೆ ಎನ್ನುತ್ತಾರೆ ಸಾಹಿತಿಗಳು.
ತುಕ್ಕುಹಿಡಿದ ಸಮಾಧಿಯ ಫಲಕ: 2020 ಮಾರ್ಚ್ 16ರಂದು ಇಹಲೋಕ ತ್ಯಜಿಸಿದ್ದ ನಾಡೋಜ ಪಾಟೀಲ್ ಪುಟ್ಟಪ್ಪನವರ ಆಸೆಯಂತೆ ಹಲಗೇರಿ ಗ್ರಾಮದ ತೆಂಗಿನ ಅಡಿಕೆ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದು ಅವರ ಪೂರ್ವಜರ ಸ್ಥಳ ಕೂಡ ಹೌದು. ಸಮಾಧಿ ಪಕ್ಕದಲ್ಲೇ ಎರಡು ಕಡೆ ರಸ್ತೆ ಇದೆ. ಎರಡೂ ಬದಿಯಲ್ಲಿ ಪಾಟೀಲ ಪುಟ್ಟಪ್ಪ ಸಮಾಧಿ ಎಂದು ಹಾಕಲಾಗಿರುವ ಫಲಕ ತುಕ್ಕು ಹಿಡಿದಿದೆ. ಫಲಕ ಬಣ್ಣ ಕಂಡು ಮೂರ್ನಾಲ್ಕು ವರ್ಷಗಳೇ ಗತಿಸಿವೆ. ಪುಟ್ಟಪ್ಪ ಸಮಾಧಿ ಇರಲಿ, ಸಮಾಧಿಗೆ ಹೋಗಲು ಕೂಡಾ ಸರಿಯಾದ ದಾರಿಯೂ ಇಲ್ಲ. ತಗಡಿನ ಫಲಕ ಸಂಪೂರ್ಣವಾಗಿ ತುಕ್ಕುಹಿಡಿದೆ. ಯಾವಾಗ ಬೇಕಾದರೂ ಬೀಳಬಹುದು ಎಂದು ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Laxmi News 24×7