ರಾಯ್‍ಪುರ: ಪೊಲೀಸ್ ಪೇದೆಯೋರ್ವ ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಛತ್ತೀಸ್‍ಗಢದ ರಾಜನಂದಗಾಂವ್‍ನ ಮನ್‍ಪುರನಲ್ಲಿ ನಡೆದಿದೆ.
ಜಂಜಗೀರ್-ಚಂಪಾ ಜಿಲ್ಲೆಯ ಅಮ್ಲಿಡಿಹ್ ನಿವಾಸಿ ಮುಖೇಶ್ ಮನ್ಹಾರ್ (38), ಪತ್ನಿ ಬಬಿತಾ ಮನ್ಹಾರ್ (32) ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾರೆ. ಮುಖೇಶ್ ಅವರನ್ನು ನಕ್ಸಲ್ ಪೀಡಿತ ಪ್ರದೇಶದ ಮನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳ ಕಾಲ ನಿಯೋಜಿಸಲಾಗಿತ್ತು. ಹೀಗಾಗಿ ಅವರು ಪತ್ನಿ ಬಬಿತಾ ಮನ್ಹಾರ್ ಮತ್ತು 4 ವರ್ಷದ ಮಗಳ ಜೊತೆಗೆ ಪೊಲೀಸ್ ಠಾಣೆ ಆವರಣದ ಸರ್ಕಾರಿ ಕಟ್ಟಡದಲ್ಲಿ ವಾಸಿಸುತ್ತಿದ್ದರು.
ಮುಖೇಶ್ ಅವರ ಮನೆಯಿಂದ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಡಿನ ಶಬ್ದ ಕೇಳಿ ಬಂದಿತ್ತು. ತಕ್ಷಣವೇ ಸ್ಥಳೀಯರು ಹೋಗಿ ನೋಡಿದಾಗ, ಪೇದೆ ಮುಖೇಶ್ ಮೊದಲು ಗುಂಡಿಕ್ಕಿ ಪತ್ನಿಯನ್ನ ಕೊಂದಿದ್ದಾರೆ. ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಜಗಳದಿಂದ ಮುಖೇಶ್ ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ. ಆದರೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮುಖೇಶ್ ಹಾಗೂ ಬಬಿತಾ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ತಂದೆಯ ಕೃತ್ಯದಿಂದಾಗಿ 4 ವರ್ಷದ ಹೆಣ್ಣು ಮಗು ಅನಾಥವಾಗಿದೆ.