ತುಮಕೂರು: ಕ್ವಾರಂಟೈನ್‍ನಲ್ಲಿ ಇದ್ದವರಿಗೆ ಸರಿಯಾದ ಊಟ, ತಿಂಡಿ ವ್ಯವಸ್ಥೆ ಮಾಡದ್ದನ್ನು ಪ್ರಶ್ನಿಸಿದಕ್ಕೆ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿಯೋರ್ವ ಬೀದಿ ರಂಪಾಟ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕನಾಯಹಳ್ಳಿ ತಾಲೂಕಿನ ಹುಳಿಯಾರಿನ ಬಿಸಿಎಂ ಹಾಸ್ಟೆಲ್‍ನಲ್ಲಿ ಯುವಕ ಮತ್ತು ಆತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ರಾತ್ರಿ ಊಟ ವ್ಯವಸ್ಥೆ ಇಲ್ಲದೆ ಬಗ್ಗೆ ಕ್ವಾರಂಟೈನ್‍ನಲ್ಲಿದ್ದ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ, ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಈ ನಡುವೆ ಸ್ಥಳೀಯರು ಪಟ್ಟಣ ಪಂಚಾಯ್ತಿ ಸಿಇಓ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಲಿಲ್ಲ. ಇಂದು ಬೆಳಗ್ಗೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಿಟ್ಟಾದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುನಾಥ್ ನನಗೆ ನಿಗಾವಹಿಸಲು ಅಷ್ಟೇ ಜವಾಬ್ದಾರಿ ನೀಡಿದ್ದಾರೆ. ಊಟ ಕೊಡುವುದಕ್ಕೆ ಬಿಸಿಎಂ ಹಾಸ್ಟೆಲ್ ಅಧಿಕಾರಿಗಳು ಇದ್ದಾರೆ. ಅದನ್ನೆಲ್ಲ ನನ್ನ ಬಳಿ ಕೇಳಬೇಡಿ ಎಂದು ಉದ್ಧಟತನ ತೋರಿದ್ದಾನೆ.