ಸೋಂಕಿತ ಕ್ಯಾಮೆರಾಮನ್ ಜೊತೆ ಪ್ರಾಥಮಿಕ ಸಂಪರ್ಕ
– ಕ್ವಾರಂಟೈನ್ ಆಗಬೇಕಾದವರು ಸಭೆಯಲ್ಲಿ ಭಾಗಿ
– ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಪ್ರಶ್ನಿಸಿ ಟೀಕೆ
ಬೆಂಗಳೂರು: ಕೊರೊನಾ ಕ್ವಾರಂಟೈನ್ ವಿಚಾರದಲ್ಲಿ ಸಚಿವರಿಗೊಂದು ನಿಯಮ ಬೇರೆಯವರಿಗೊಂದು ನಿಯಮವೇ ಹೀಗೊಂದು ಪ್ರಶ್ನೆ ಎದ್ದಿದೆ. ವೈದ್ಯಕೀಯ ಶಿಕ್ಷಣ ಸಚಿವರ ನಡೆಯಿಂದಾಗಿ ಈ ಪ್ರಶ್ನೆ ಸೃಷ್ಟಿಯಾಗಿದೆ.
ಹೌದು. ಖಾಸಗಿ ವಾಹಿನಿಯ ಕ್ಯಾಮೆರಾಮೆನ್‍ಗೆ ಸೋಂಕು ದೃಢಪಟ್ಟಿದ್ದು, ಆತನ ಸಂಪರ್ಕಕ್ಕೆ ಸಚಿವರು ಬಂದಿದ್ದು ಅವರು ಕ್ವಾರಂಟೈನ್ ಮಾರ್ಗಸೂಚಿ ಪಾಲಿಸುತ್ತಿಲ್ಲ. ಹೀಗಾಗಿ ಸೋಂಕಿತನ ಪ್ರಾಥಮಿಕ ಸಂಪರ್ಕಕದಲ್ಲಿದ್ದರೂ ಯಾಕೆ ಕ್ವಾರಂಟೈನ್ ಆಗಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಕೊರೊನಾ ಸೋಂಕಿತ ಕ್ಯಾಮೆರಾಮನ್ 24ರಂದೇ ಆಸ್ಪತ್ರೆಗೆ ದಾಖಲಾಗಿದ್ದು, ಆ ದಿನದಿಂದಲೇ ಸಚಿವರ ಕ್ವಾರಂಟೈನ್ ಆಗಬೇಕಿತ್ತು. ಹೋಮ್ ಕ್ವಾರಂಟೈನ್ ಆಗುವ ಅವಧಿ 14 ದಿನ ಅಂತ ಮಾರ್ಗಸೂಚಿಯಲ್ಲಿದೆ. ಆದರೆ 14 ದಿನದ ಬದಲಿಗೆ ಕೇವಲ 7 ದಿನವಷ್ಟೇ ಕ್ವಾರಂಟೈನ್ ಆಗಿದ್ದಾರೆ.
ಸಚಿವರಿಗೆ ಕೊರೊನಾ ಪರೀಕ್ಷೆ ಈಗಾಗಲೇ ನಡೆದಿದ್ದು ನೆಗೆಟಿವ್ ಬಂದಿದೆ. ಬುಧವಾರ ಮಂಡ್ಯದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕ್ವಾರಂಟೈನ್‍ನಲ್ಲಿ ಇರಬೇಕಾದವರು ಎಲ್ಲಂದರಲ್ಲಿ ಓಡಾಡಬಹುದೇ? ಜನರಿಗೊಂದು ನ್ಯಾಯ? ಸಚಿವರಿಗೊಂದು ನ್ಯಾಯವೇ ಎಂಬ ಪ್ರಶ್ನೆ ಎದ್ದಿದೆ.
ಡಿಕೆಶಿ ಪ್ರಶ್ನೆ: ಕ್ಯಾಮೆರಾಮನ್ ಜೊತೆ ಸಿಎಂ, ಡಿಸಿಎಂ, ಸಚಿವರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಆದರೆ ಅವರು ಯಾಕೆ ಕ್ವಾರಂಟೈನ್ ಆಗಲಿಲ್ಲ? ಜನರಿಗೆ ಮಾದರಿಯಾಗಬೇಕಾದವರು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ಪ್ರಶ್ನೆ ಕೇಳಿದ್ದಾರೆ.
ಸೆಲ್ಫ್ ಕ್ವಾರಂಟೈನ್: ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದ ಬೊಮ್ಮಾಯಿ, ಅಶ್ವಥ್ ನಾರಾಯಣ, ಸಿಟಿ ರವಿ ಪರೀಕ್ಷೆ ನಡೆಸಿದ್ದು ನೆಗೆಟಿವ್ ಬಂದಿದ್ದು, ಈಗ ಸೆಲ್ಫ್ ಕ್ವಾರಂಟೈನ್‍ನಲ್ಲಿದ್ದಾರೆ. ಸೋಮಣ್ಣ ಅವರ ಪರೀಕ್ಷಾ ವರದಿ ಬರಬೇಕಿದೆ.
ಪತ್ರಕರ್ತರು ಕ್ವಾರಂಟೈನ್: ಕ್ಯಾಮೆರಾಮನ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಪತ್ರಕರ್ತರು ಈಗಾಗಲೇ ಕ್ವಾರಂಟೈನ್ ನಲ್ಲಿದ್ದಾರೆ. ಏ.20 ರಿಂದ 22ರವರೆಗೆ ಸೋಂಕಿತ ಕ್ಯಾಮೆರಾಮನ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ, ವಿಧಾನಸೌಧಕ್ಕೆ ಭೇಟಿ ನೀಡಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ, ಸಿಟಿ ರವಿ, ಸೋಮಣ್ಣ, ಸುಧಾಕರ್ ಅವರ ಸಂದರ್ಶನವನ್ನು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಕಾರಿನಲ್ಲೇ ಕುಳಿತುಕೊಂಡು ಮಾತನಾಡಿದ್ದಾರೆ.
ನೆಗೆಟಿವ್ ಬಂದಿದೆ: ಡಿಕೆ ಶಿವಕುಮಾರ್ ಟ್ವೀಟ್ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿಟಿ ರವಿ ಟ್ವೀಟ್ ಮಾಡಿ, ಪಾಸಿಟಿವ್ ಬಂದ ಕ್ಯಾಮೆರಾಮೆನ್ ಜೊತೆ ಸಭೆಯಲ್ಲಿ ಹತ್ತಿರದಿಂದ ಯಾವುದೇ ಸಂಪರ್ಕ ಆಗದೇ ಇದ್ದರೂ ನಾನು ಏ.28ರಂದು ಪರೀಕ್ಷೆ ಎದುರಿಸಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.