ರಾಯಚೂರು: ಜಿಲ್ಲೆಗೆ ಇಂದು ಸಹ ಕೊರೊನಾಘಾತವಾಗಿದ್ದು ಜಿಲ್ಲೆಯಲ್ಲಿ ಒಂದೇ ದಿನ 18 ಕೊರೊನಾ ಪಾಸಿಟಿವ್ ಪ್ರಕರಗಳು ದೃಢವಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 403ಕ್ಕೆ ಏರಿದೆ. ಇಂದು ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಕಂಟೈನ್ಮೆಂಟ್ ಝೋನ್ ನಿಂದ ಒಂದು ಪ್ರಕರಣ ದಾಖಲಾಗಿದೆ.
ತೆಲಂಗಾಣದಿಂದ ಬಂದಿರುವ ಇಬ್ಬರು ಹಾಗೂ ತಮಿಳುನಾಡಿನಿಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದಿರುವ 10 ಜನರಲ್ಲಿ ಪಾಸಿಟಿವ್ ದೃಢವಾಗಿದೆ. ಮಹಾರಾಷ್ಟ್ರದಿಂದ ಬಂದಿರುವ 10 ಸೋಂಕಿತರ ಪೈಕಿ ಮೂರು ಜನ ಮಕ್ಕಳಿದ್ದಾರೆ. ಇಲ್ಲಿಯವರೆಗೂ ಜಿಲ್ಲೆಯ ದೇವದುರ್ಗದ 312, ರಾಯಚೂರಿನ 61, ಲಿಂಗಸುಗೂರಿನ 19 ಹಾಗೂ ಮಾನ್ವಿ ತಾಲೂಕಿನ 11 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯದಲ್ಲೇ ಜೂನ್ 17ರಿಂದ ಆಂಧ್ರಪ್ರದೇಶಕ್ಕೆ ಜಿಲ್ಲೆಯಿಂದ ಸಾರಿಗೆ ಬಸ್ಸುಗಳ ಓಡಾಟ ಆರಂಭವಾಗಲಿದೆ. ರಾಯಚೂರು ವಿಭಾಗದಿಂದ ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಆರಂಭಗೊಳ್ಳಲಿದೆ. ರಾಯಚೂರಿನಿಂದ ಈ ಮೊದಲು 15 ಬಸ್ಸುಗಳು ಓಡಾಡುತ್ತಿದ್ದವು, ಈಗ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಬಸ್ ಓಡಿಸಲಾಗುವುದು. ರಾಯಚೂರಿನಿಂದ ಬೆಂಗಳೂರಿಗೆ ಹೋಗುವ 5 ಬಸ್ಸುಗಳು ಆಂಧ್ರ ಮಾರ್ಗದಲ್ಲಿ ಓಡಾಡಲಿವೆ. ಇನ್ನೂ ರಾಯಚೂರು ಮೂಲಕ ಮುಧೋಳ -ಕರ್ನೂಲ್ ಬಸ್ ಸಂಚಾರ. ಶಹಾಪುರ- ಕರ್ನೂಲ್ ಬಸ್ ಸಂಚಾರ ಸಹ ಆರಂಭವಾಗಲಿದೆ.
ರಾಯಚೂರಿನಿಂದ ಬೆಂಗಳೂರಿಗೆ ಹೋಗುವ ಬಸ್ಸುಗಳಿಗೆ ಮಾತ್ರ ಟಿಕೆಟ್ ಮುಂಗಡ ಕಾಯ್ದಿರಿಸಬೇಕಿದೆ. ಮಂತ್ರಾಲಯಕ್ಕೆ ಹೋಗುವ ಬಸ್ಸುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಅಗತ್ಯವಿಲ್ಲ. ಬಸ್ಸುಗಳಲ್ಲಿ ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ ಅಂತ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಬರುವವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತೆ. ಬೆಂಗಳೂರಿನಿಂದ ನೇರವಾಗಿ ಬರುವವರಿಗೆ ಕ್ವಾರಂಟೈನ್ ವಿನಾಯಿತಿಯಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.