ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯ 51 ವರ್ಷದ ಸಿಪಿಐಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಸೋಂಕಿತ ಸಿಪಿಐ ಅವರನ್ನು ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಳೆದ ಒಂದು ವಾರದ ಹಿಂದೆ ಕಂಪ್ಲಿ ಪೊಲೀಸ್ ಠಾಣೆ ಪಿಎಸ್‍ಐ ಅವರಿಗೆ ಗಂಡು ಮಗು ಜನಿಸಿತ್ತು. ಹೀಗಾಗಿ ನಗರದ ಹೊರ ವಲಯದ ಸಮುದಾಯ ಭವನದಲ್ಲಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ಅದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಂಪ್ಲಿ ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಕಾರಣ ಸಂಪೂರ್ಣ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಅದೇ ಪಾರ್ಟಿಯಲ್ಲಿ ಕಂಪ್ಲಿ ಸಿಪಿಐ ಸಹ ಭಾಗಿ ಆಗಿದ್ದರು. ಹೀಗಾಗಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಹೋಮ್ ಗಾರ್ಡ್ ಅವರನ್ನು ಕ್ವಾರೆಂಟೈನ್ ನಾಡಲಾಗಿತ್ತು. ಆದರೆ ಪೊಲೀಸ್ ಸಿಬ್ಬಂದಿಯ ರ್ಯಾಂಡಮ್ ಟೆಸ್ಟ್ ಮಾಡಿದ್ದು ನಿನ್ನೆ 52 ಜನರಲ್ಲಿ ಸಿಪಿಐ ಅವರಿಗೆ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಉಳಿದ ಸಿಬ್ಬಂದಿಯಲ್ಲಿ ಸಹ ಕೊರೊನಾ ಭಯ ಉಂಟು ಮಾಡಿದೆ.
ಕಂಪ್ಲಿ ಠಾಣೆ ಸಿಪಿಐ ವಾಹನದ ಚಾಲಕ ಸೇರಿ ಕಂಪ್ಲಿ ಹಾಗೂ ಕಮಲಾಪುರ ಠಾಣೆಯ ಮೂವರು ಪಿಎಸ್‍ಐಗಳು ಹಾಗೂ ಪೇದೆಗಳು ಸಂಪರ್ಕದಲ್ಲಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಪಟ್ಟಣದ ಠಾಣೆಯ ಎಲ್ಲಾ ಸಿಬ್ಬಂದಿಯನ್ನು ಕ್ವಾರೈಂಟೈನಲ್ಲಿ ಇಡಲಾಗುವುದು. ಅಲ್ಲದೇ ಪೇದೆಯೊಂದಿಗೆ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ. ಕಂಪ್ಲಿ ಪೊಲೀಸ್ ಠಾಣೆಯ ಸಿಪಿಐ ಅವರ ಮನೆಗೆ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ.