ಪಿಯು ಪರೀಕ್ಷೆಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳಿಂದ ಪಡೆದಿರುವ ಪ್ರವೇಶ ಶುಲ್ಕ ಮರುಪಾವತಿಗೆ ನಿರಾಕರಿಸುತ್ತಿದೆ. ಪ್ರತಿ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ 190 ರೂ. ಪಡೆದಿದೆ. ಇದೇ ರೀತಿ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಂದ 500 ರೂ.ಪಡೆದಿದೆ. ಇನ್ನು ಕೆಲವು ವಿದ್ಯಾರ್ಥಿಗಳು ತಡವಾಗಿ ಶುಲ್ಕ ಪಾವತಿಸಿರುವುದಕ್ಕೆ ದಂಡ ಶುಲ್ಕವಾಗಿ 700 ರಿಂದ 1320 ರೂ.ಹೆಚ್ಚುವರಿಯಾಗಿ ಪಡೆದಿದೆ. ಈ ಬಾರಿ 6.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ 11 ರಿಂದ 15 ಕೋಟಿ ರೂ. ಸಂಗ್ರಹವಾಗಿದೆ. ಇನ್ನು ಖಾಸಗಿ ಕಾಲೇಜುಗಳು ಇದರ ದುಪ್ಪಟ್ಟು ಶುಲ್ಕವನ್ನು ಪಡೆದಿವೆ. ಒಬ್ಬ ವಿದ್ಯಾರ್ಥಿಯಿಂದ 750 ರೂ.ರಿಂದ 1200 ರೂ.ಗಳವರೆಗೆ ಪಡೆದಿದೆ ಎಂದು ತಿಳಿದು ಬಂದಿದೆ. ಪರೀಕ್ಷೆ ನಡೆದಿದ್ದರೆ, ಪರೀಕ್ಷಾ ಶುಲ್ಕ ಪಡೆಯುವುದು ನ್ಯಾಯಯುತವಾಗಿದೆ. ಆದರೆ, ಪರೀಕ್ಷೆಯನ್ನೇ ರದ್ದು ಮಾಡಿರುವುದರಿಂದ ಈ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕಿದೆ. ಈ ಬಗ್ಗೆ ಯಾವುದೇ ವಿದ್ಯಾರ್ಥಿಗಳು ಚಕಾರ ಎತ್ತದೇ ಇರುವುದರಿಂದ ಇದನ್ನು ಇತರೆ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಲು ಇಲಾಖೆ ಆಲೋಚಿಸಿದೆ.
ಶಿಕ್ಷಕರಿಗೆ ಪ್ಯಾಕೇಜ್: ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲಾಕಾಲೇಜು ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಕಲ್ಪಿಸಲು ಈ ಹಣವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಇಲಾಖೆ ಆಲೋಚಿಸಿದೆ. ಈಗಾಗಲೇ ಶಿಕ್ಷಣ ಇಲಾಖೆ ತನ್ನ ಅಧೀನದಲ್ಲಿರುವ ಎಲ್ಲ ವಿಭಾಗಗಳಲ್ಲಿ ಲಭ್ಯವಿರುವ ಅನುದಾನದ ಮಾಹಿತಿಯನ್ನು ಕೇಳಿದೆ. ಕರೊನಾ ಸಮಯದಲ್ಲಿ ಬಹುತೇಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ವೇಳೆಯಲ್ಲಿ 100 ರೂ.ಕೂಡ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಪಡೆದಿರುವ ಪರೀಕ್ಷಾ ಶುಲ್ಕವನ್ನು ಹಿಂತಿರುಗಿಸಬೇಕೆಂದು ಪಾಲಕರು ಇಲಾಖೆಯನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ನ್ಯಾಯಯುತವಾಗಿ ಬಡ ಖಾಸಗಿ ಶಾಲಾ ಶಿಕ್ಷಕರಿಗೆ ನೀಡಿದರೆ ಉತ್ತಮ. ಆದರೆ, ಸರ್ಕಾರ ಹಣವನ್ನು ಇತರೆ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲವೆಂದು ಪಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಶುಲ್ಕವನ್ನು ವಾಪಸ್ ನೀಡುವಂತೆ ಇಲಾಖೆಗೆ ಮನವಿ ಮಾಡಿದ್ದೇವೆ. ಸದ್ಯ ಆ ರೀತಿ ಹಿಂತಿರುಗಿಸಿ ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರ ಕ್ರಮವಹಿಸಬೇಕು ಎಂದು ಖಾಸಗಿ ಶಾಲಾ ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಯೋಗಾನಂದ ಹೇಳುತ್ತಾರೆ.
ರಾಜ್ಯ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರ ಸಂಘದ ಅದ್ಯಕ್ಷ ಎ.ಎಚ್.ನಿಂಗೇಗೌಡ ಅವರು ಇದೀಗ ಪಡೆದಿರುವ ಹಣವನ್ನು ಹಿಂದಿರುಗಿಸಿ ವಿದ್ಯಾರ್ಥಿಗಳಿಗೆ ನೀಡುವುದು ಕಷ್ಟ. ಇದರ ಬದಲು ಸಂಬಳವಿಲ್ಲದೆ ಇರುವ ಖಾಸಗಿ ಶಾಲಾಕಾಲೇಜು ಶಿಕ್ಷಕರಿಗೆ ಹಂಚಿಕೆ ಮಾಡಲು ಉಪಯೋಗಿಸುವುದು ಉತ್ತಮ ಎಂದರು.
