ಚೆನ್ನೈ,ಜು.30- ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ 4 ಕೆಜಿ ಚಿನ್ನ, 601 ಕೆಜಿ ಬೆಳ್ಳಿ ಸಿಕ್ಕಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಜಯಲಲಿತಾ ವಾಸವಿದ್ದ ವೇದ ನಿಲಯಂ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ವೇದ ನಿಲಯಂನಲ್ಲಿರುವ ಸ್ಥಿರ ಮತ್ತು ಚರ ಸ್ವತ್ತನ್ನು ತಮಿಳುನಾಡು ಸರ್ಕಾರ ಪುರಚ್ಚಿ ತಲೈವಿ ಡಾ.ಜಯಲಲಿತಾ ಮೆಮೋರಿಯಲ್ ಫೌಂಡೇಷನ್‍ಗೆ ಕಳುಹಿಸಿಕೊಡುತ್ತಿದೆ.
ಸರ್ಕಾರ ನಿವಾಸದಲ್ಲಿರುವ ವಸ್ತುಗಳನ್ನು ಪಟ್ಟಿಮಾಡಿದ್ದು, ಪೀಠೋಪಕರಣಗಳು, ಪುಸ್ತಕಗಳು, ಆಭರಣಗಳು ಸೇರಿ ಒಟ್ಟು 32,721 ಚರ ಸ್ವತ್ತುಗಳಿವೆ ಎಂದು ತಿಳಿಸಿದೆ.
# ನಿವಾಸದಲ್ಲಿ ಏನು ಸಿಕ್ಕಿದೆ?
4.72 ಕೆಜಿ ಚಿನ್ನ( 14 ವಸ್ತುಗಳು), 601. 424 ಕೆಜಿ ಬೆಳ್ಳಿ( 87 ವಸ್ತುಗಳು) 162 ಸಣ್ಣ ಪಾತ್ರೆಗಳು, 11 ಟಿವಿ ಸೆಟ್, 10 ಫ್ರಿಡ್ಜ್, 556 ಪಿಠೋಪಕರಣ ಸಾಮಾಗ್ರಿಗಳು, 10,438 ವಸ್ತ್ರ ಸಾಮಾಗ್ರಿಗಳು, 6,514 ಅಡಿಗೆ ಪಾತ್ರೆಗಳು, 15 ಪೂಜಾ ಪಾತ್ರೆಗಳು, 10,438 ತುಂಡು ಉಡುಗೆ ವಸ್ತುಗಳು(ಟವೆಲ್/ಬೆಡ್‍ಶೀಟ್‍ಗಳು/ಇತರ ಬಟ್ಟೆ/ ಪರದೆ/ ಪಾದರಕ್ಷೆಗಳು), 29 ದೂರವಾಣಿಗಳು / ಮೊಬೈಲ್ ಫೋನ್‍ಗಳು, 221 ಅಡುಗೆ ಎಲೆಕ್ಟ್ರಿಕ್ ವಸ್ತುಗಳು, 251 ಎಲೆಕ್ಟ್ರಿಕ್ ವಸ್ತುಗಳು, 8,376 ಪುಸ್ತಕಗಳು, 394 ಮೆಮೆಂಟೋಗಳು ದೊರೆತಿವೆ.
ನ್ಯಾಯಾಲಯದ ದಾಖಲೆಗಳು ಮತ್ತು ಐಟಿ ಹೇಳಿಕೆಗಳು, 253 ಲೇಖನ ಸಾಮಗ್ರಿಗಳು, 65 ಸೂಟ್‍ಕೇಸ್‍ಗಳು, 108 ಸೌಂದರ್ಯವರ್ಧಕ ವಸ್ತುಗಳು, 6 ಗಡಿಯಾರಗಳು, 1 ಕ್ಯಾನನ್ ಫೋಟೋಕಾಪಿಂಗ್ ಯಂತ್ರ, 1 ಲೇಸರ್ ಪ್ರಿಂಟರ್ ಮತ್ತು 959 ವಿವಿಧ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ.
ಅಣ್ಣಾ ಡಿಎಂಕೆ ಪಕ್ಷದ ನಾಯಕಿಯಾಗಿದ್ದ ಜಯಲಲಿತಾ ಅವರು ಮೂರು ಅಂತಸ್ತಿನ ವೇದ ನಿಲಯಂ ನಿವಾಸದಲ್ಲಿ ವಾಸಿಸುತ್ತಿದ್ದರು. 2016ರಲ್ಲಿ ಮೃತಪಟ್ಟ ಬಳಿಕ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದಾಗಿ ತಮಿಳುನಾಡು ಸರ್ಕಾರ ಪ್ರಕಟಿಸಿತ್ತು.
ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಜುಲೈ 25 ರಂದು ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ 67.9 ಕೋಟಿ ರೂ. ಹಣವನ್ನು ಠೇವಣಿಯಾಗಿ ಇರಿಸಿತ್ತು.
ಇದರಲ್ಲಿ 36.9ಕೋಟಿ ರೂ. ಗಳನ್ನು ಜಯಲಲಿತಾ ಅವರು ಬಾಕಿ ಉಳಿಸಿಕೊಂಡಿ ತೆರಿಗೆಯನ್ನು ಇಲಾಖೆಗೆ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ.
ಜಯಲಲಿತಾ ಬಂಗಲೆಯಲ್ಲಿ ಎರಡು ಮಾವಿನ ಮರ, ಒಂದು ಹಲಸಿನ ಮರ, 5 ತೆಂಗಿನ ಮರ, ಬಾಳೆ ಗಿಡಗಳು ಇವೆ ಎಂದು ಸರ್ಕಾರ ತಿಳಿಸಿದೆ.