ಕೋಲ್ಕತ್ತಾ: ಸುಮಾರು 780 ಕೆ.ಜಿ. ತೂಕದ ಅಪರೂಪದ ಮೀನೊಂದು ಪಶ್ಚಿಮ ಬಂಗಾಳದ ದಿಘಾದಲ್ಲಿ ಸಿಕ್ಕಿದೆ.
ಚಿಲ್‍ಶಂಕರ್ ಮೀನು ಎಂದು ಕರೆಯಲಾಗುತ್ತದೆ. ಇದು ಸುಮಾರು 780 ಕೆ.ಜಿ ತೂಕ ಇದೆ. ಚಿಲ್‍ಶಂಕರ್ ಮೀನು ಅಪರೂಪದ ಜಾತಿಯಾಗಿದ್ದು, ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸಿಕ್ಕಿದೆ. ಈ ಮೊದಲು ಇಂತಹ ಮೀನನ್ನು ನೋಡಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.
ಸೋಮವಾರ ಒರಿಸ್ಸಾದ ವ್ಯಕ್ತಿಯೊಬ್ಬನ ಒಡೆತನದ ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸೆರೆ ಸಿಕ್ಕಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಕಡಲಲ್ಲಿ ಈ ಅಪರೂಪದ ಮೀನು ಸಿಗುವುದೇ ಇಲ್ಲ. ಹೀಗಾಗಿ ಇದಕ್ಕೆ ಭಾರೀ ಬೆಲೆ ಹಾಗೂ ಬೇಡಿಕೆಯಿದೆ. ಆದ್ದರಿಂದ ಬೃಹತ್ ಚಿಲ್‍ಶಂಕರ್ ಮೀನನ್ನು ನೋಡಲು ಜನರು ಮತ್ತು ಸ್ಥಳೀಯ ಪ್ರವಾಸಿಗರು ಬಂದಿದ್ದರು.
ಈ ಮೀನು ತುಂಬಾ ತೂಕವಾಗಿದ್ದು, ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಹಗ್ಗಗಳನ್ನು ಬಳಸಲಾಗಿತ್ತು. ಸ್ಥಳೀಯ ಮೀನುಗಾರರು ಹಗ್ಗದಿಂದ ಎಳೆದುಕೊಂಡು ಹೋಗಿ ವ್ಯಾನ್‍ಗೆ ಹಾಕಿದ್ದರು. ಅಲ್ಲಿಂದ ಸ್ಥಳೀಯ ಮೀನುಗಾರಿಕಾ ಸಹಕಾರ ಸಂಘದ ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋಗಲಾಗಿತ್ತು.
ಈ ಮೀನಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 2100 ರೂ.ಗೆ ಹರಾಜು ಹಾಕಲಾಯಿತು. ಮೀನಿನ ಒಟ್ಟು ಬೆಲೆ 20 ಲಕ್ಷ ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕೊರೊನಾ ಸಂಕಷ್ಟದಲ್ಲೂ ಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.
ಇದು ಚಿಲ್‍ಶಂಕರ್ ಮೀನು. ಇದರ ತೂಕ 780 ಕಿ.ಗ್ರಾಂ. ಈ ಮೀನಿನ ಮಾರುಕಟ್ಟೆ ಬೆಲೆ ಕೆ.ಜಿ.ಗೆ 2100 ರೂ. ಇಷ್ಟು ದೊಡ್ಡ ಮತ್ತು ಅಪರೂಪದ ಮೀನನ್ನು ನಾವು ನೋಡಿಲ್ಲ ಎಂದು ಸ್ಥಳೀಯ ಮೀನುಗಾರ ಹೇಳಿದರು. ಮೀನು ಮೂಳೆ ಮತ್ತು ಎಣ್ಣೆಯನ್ನು ಔಷಧಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇನ್ನುಳಿದದ್ದು ಖಾದ್ಯವಾಗಿ ಸವಿಯಲ್ಪಡುತ್ತದೆ ಎಂದು ಮೀನುಗಾರರು ಹೇಳುತ್ತಾರೆ.