Breaking News

ವೈದ್ಯಾಧಿಕಾರಿಗಳ ನೇಮಕಾತಿ ಕನಿಷ್ಟ ವಯೋಮಿತಿ ಹೆಚ್ಚಳ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್‌

Spread the love

ಬೆಂಗಳೂರು: ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21 ರಿಂದ 26 ವರ್‌ಷಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೆ ತಂದ ನಿಯಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಅಲ್ಲದೇ, ಅರ್ಜಿದಾರರು ಹೈಕೋರ್ಟ್‌ ಗೆ ಮೊರೆ ಹೋಗುವ ಮೊದಲು ಸರ್ಕಾರದ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯ ಕ್ರಮ ಸರಿ ಇದೆ ಎಂದೂ ಸಹ ಹೈಕೋರ್ಟ್‌ ಹೇಳಿದೆ.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಸೇವೆಗಳು (ಹಿರಿಯ ವೈದ್ಯಾಧಿಕಾರಿಗಳು/ಪರಿಣಿತರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ದಂತ ಆರೋಗ್ಯ ವೈದ್ಯಾಧಿಕಾರಿಗಳ ನೇಮಕಾತಿ) (ವಿಶೇಷ) ಅಧಿನಿಯಮಗಳು-2019ರ ಸೆಕ್ಷನ್‌ 4 ಮತ್ತು 6ಕ್ಕೆ ತಿದ್ದುಪಡಿ ತಂದು ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21ರಿಂದ 26 ವರ್‌ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಡಾ.ವಿಕಾಸ ಗೌಡ ಸೇರಿ ಆರು ಜನ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರ ಜಾರಿಗೆ ತಂದ ತಿದ್ದುಪಡಿ ನಿಯಮವು ನ್ಯಾಯಸಮ್ಮತ ಹಾಗೂ ತರ್ಕಬದ್ಧವಾಗಿದೆ. ಸಂವಿಧಾನದ ಪರಿಚ್ಛೇದ 14 (ಸಮಾನ ಹಕ್ಕುಗಳು) ಮತ್ತು 16ಕ್ಕೆ (ಸಮಾನ ಅವಕಾಶ) ವಿರುದ್ಧವಾಗಿಲ್ಲ ಎಂದು ಆದೇಶಿಸಿತು.

 

ಅಲ್ಲದೆ, ಸದ್ಯದ ಕೋವಿಡ್‌-19 ಪರಿಸ್ಥಿತಿ ನಿರ್ವಹಿಸಲು ಅನುಭವವುಳ್ಳ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಅನುಕೂಲವಾಗುವಂತೆ ತಿದ್ದುಪಡಿ ನಿಯಮ ಜಾರಿಗೊಳಿಸಲು ಸಚಿವ ಸಂಪುಟ ಕೈಗೊಂಡ ನಿರ್ಣಯವನ್ನು ಗಮನಿಸಿದ ನ್ಯಾಯಪೀಠ, ತಿದ್ದುಪಡಿ ನಿಯಮವನ್ನು ಪುರಸ್ಕರಿಸಿ ಅರ್ಜಿ ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು, ತಿದ್ದುಪಡಿ ನಿಯಮವು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದೆ. ಕೇವಲ ವೈದ್ಯಕೀಯ ಕೋರ್ಶ್‌ಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅವಧಿ ತೆಗೆದುಕೊಂಡವರಿಗೆ ಅನುಕೂಲ ಮಾಡಿಕೊಡಲು ಈ ನಿಯಮ ಜಾರಿಗೆ ತರಲಾಗಿದೆ. ಕಡಿಮೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ವೈದ್ಯಾಧಿಕಾರಿಗಳ ಹುದ್ದೆ ಗಿಟ್ಟಿಸಲು ಅನುಕೂಲವಾಗುತ್ತದೆ. ಆದ್ದರಿಂದ ತಿದ್ದುಪಡಿ ನಿಯಮವನ್ನು ಸಂವಿಧಾನ ಬಾಹಿರ ಎಂದು ಘೋಷಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅರುಣ್‌ ಶ್ಯಾಮ್‌ ವಾದಿಸಿ, ಸಾಮಾನ್ಯವಾಗಿ ಭಾರತೀಯ ಶಿಕ್ಷಣದಲ್ಲಿ ಎಂಬಿಬಿಎಸ್‌ ಮತ್ತು ವೈದ್ಯಕೀಯ ಪದವಿ ಪೂರ್ಣಗೊಳಿಸುವ ವೇಳೆಗೆ ಅಭ್ಯರ್ಥಿಗೆ 23ವರ್‌ಷ ಆಗಿರುತ್ತದೆ. ಇಂಟರ್ನ್ಶಿಫ್‌ಗೆ ಒಂದು ವರ್‌ಷ ಮತ್ತು ಕಡ್ಡಾಯ ಗ್ರಾಮೀಣ ಸೇವೆಗೆ ಒಂದು ವರ್‌ಷ ಇರುತ್ತದೆ. ಹೀಗಾಗಿ, ಪದವಿ, ತರಬೇತಿ ಮತ್ತು ಸರ್ಕಾರಿ ಗ್ರಾಮೀಣ ಕಡ್ಡಾಯ ಸೇವೆ ಪೂರ್ಣಗೊಳಿಸುವ ವೇಳೆಗೆ ಅಭ್ಯರ್ಥಿ ವಯಸ್ಸು 25 ವರ್‌ಷ ಆಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21ರಿಂದ 26 ವರ್‌ಷಕ್ಕೆ ಹೆಚ್ಚಿಸಲಾಗಿದೆ.

ಇದು ನ್ಯಾಯಸಮ್ಮತವಾಗಿದ್ದು, ತಿದ್ದುಪಡಿ ನಿಯಮವನ್ನು ಪುರಸ್ಕರಿಸುವಂತೆ ಕೋರಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ತಿದ್ದುಪಡಿ ನಿಯಮಗಳನ್ನು ಪುರಸ್ಕರಿಸಿದೆ.

ಸರ್ಕಾರವು 2020ರ ಆ.25ರಂದು ಅಧಿಸೂಚನೆ ಹೊರಡಿಸಿ ಜಾರಿಗೆ ತಂದಿದ್ದ ತಿದ್ದುಪಡಿ ನಿಯಮವನ್ನು ಪ್ರಶ್ನಿಸಿ ಕೆಎಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಕೆಎಟಿಯು ಅರ್ಜಿಗಳನ್ನು ವಜಾಗೊಳಿಸಿದ ಕಾರಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ