ನವದೆಹಲಿ : ವಿಶ್ವವನ್ನೇ ಬೆಚ್ವಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕಿಗೆ ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಹಾಗೂ ಗೆ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಸಹಯೋಗದಲ್ಲಿ ಉತ್ಪಾದನೆಯಾಗಿರುವ ದೇಶಿ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಕ್ಲಿನಿಕಲ್ ಟಯಲ್ ಯಶಸ್ವಿಯಾಗಿ ಪೂರೈಸಿದೆ.
ಕೊರೊನಾವೈರಸ್ ವಿರುದ್ಧ ಬಳಸಲು ಅತ್ಯಂತ ಪರಿಣಾಮಕಾರಿ ಔಷಧ ಇದು ಎಂದು ಪರಿಗಣಿಸಲಾಗಿದೆ.ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ‘ಕೊವ್ಯಾಕ್ಸಿನ್’ ಲಸಿಕೆಯ ಮೊದಲ ಹಂತದ ಮೊದಲ ಭಾಗ ಬಹುತೇಕ ಯಶಸ್ವಿಯಾಗಿದೆ. ದೇಶದಲ್ಲಿ 50 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಈಗ ಆ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ.
ಲಸಿಕೆ ಪ್ರಯೋಗದ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ. ಮೊದಲ ಹಂತದ 2ನೇ ಭಾಗದಲ್ಲಿ ಇಂದು 6 ಜನರಿಗೆ ಲಸಿಕೆ ನೀಡಲಾಗಿದೆ. ಈ ಬಗ್ಗೆ PGI ರೋಹ್ಟಕ್ ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ.ಸವಿತಾ ವರ್ಮಾ ತಿಳಿಸಿದ್ದಾರೆ.
ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಬಳಿಕ ಕರ್ನಾಟಕದ ಬೆಳಗಾವಿಯ ಖಾಸಗಿ ಆಸ್ಪತ್ರೆ ಸೇರಿದಂತೆ ದೇಶದ ಹಲವೆಡೆ 12 ಆಸ್ಪತ್ರೆ, ಸಂಶೋಧನಾ ಕೇಂದ್ರಗಳಲ್ಲಿ ಪ್ರಯೋಗ ಜಾರಿಯಲ್ಲಿದೆ. ಲಸಿಕೆ ತಯಾರಿಕೆಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿದೆ.
ಹರ್ಯಾಣದ ರೋಹ್ಟಕ್ ನ ಪಿಜಿಐ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 50 ಮಂದಿಗೆ ಲಸಿಕೆ ನೀಡಲಾಗಿದೆ. ಯಾರಲ್ಲೂ ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಸೋಂಕು ತಗುಲಿದವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಡಾ. ಸವಿತಾ ವರ್ಮಾ ಹೇಳಿದ್ದಾರೆ.
ಏಮ್ಸ್ ದೆಹಲಿಯಲ್ಲಿ ಜುಲೈ 20ರಂದು ಕೊವ್ಯಾಕ್ಸಿನ್ ಪ್ರಯೋಗ ಆರಂಭವಾಗಿದೆ. 3,500ಕ್ಕೂ ಅಧಿಕ ಮಂದಿ ಈ ಪ್ರಯೋಗಕ್ಕೆ ಒಳಗಾಗಲು ನೋಂದಣಿ ಮಾಡಿಕೊಂಡಿದ್ದಾರೆ.
# ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿ , 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್
ದೇಶದ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಕರ್ನಾಟಕದ ಬೆಳಗಾವಿಯ ಜೀವನ್ ರೇಖಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಬಹುತೇಕ ಆರಂಭಗೊಂಡಿದೆ.
ಏಮ್ಸ್ ದೆಹಲಿ ಹಾಗೂ ಹೈದರಾಬಾದ್, ನಿಜಾಮ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲೂ ರೋಗಿಗಳ ಮೇಲೆ ಈ ಲಸಿಕೆಯ ಮೊದಲ ಪ್ರಯೋಗ ನಡೆಯಲಿದೆ. ಇದಲ್ಲದೆ, ಎಸ್ ಆರ್ ಎಂ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಕಾಂಚೀಪುರಂ, ಸರ್ಕಾರಿ ಸ್ವಾಮ್ಯದ ಕಿಂಗ್ ಜಾರ್ಜ್ ಆಸ್ಪತ್ರೆ, ವಿಶಾಖಪಟ್ಟಣಂ, ಏಮ್ಸ್ ಪಾಟ್ನಾ, ಗೋವಾದ ಸಿಆರ್ ಒಎಂ ಹಾಗೂ ರೇಡ್ಕರ್ ಆಸ್ಪತ್ರೆ ಸಹಯೋಗದಲ್ಲಿ ಪ್ರಯೋಗ ನಡೆಯಲಿದೆ.
ಕರ್ನಾಟಕದ ಬೆಳಗಾವಿಯ ಜೀವನ್ ಸಖಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಲ್ಲದೆ ಗಿಲುರ್ಕರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ(ನಾಗಪುರ್), ಪ್ರಖರ್ ಆಸ್ಪತ್ರೆ(ಕಾನ್ಪುರ್), ರಾಣಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ (ಗೋರಖ್ ಪುರ್) ಸಣ್ಣ ಮಟ್ಟದ ಖಾಸಗಿ ಆಸ್ಪತ್ರೆಗಳಿಗೂ ಅನುಮತಿ ನೀಡಲಾಗಿದೆ.
ಈ ಆಸ್ಪತ್ರೆಗಳಲ್ಲಿ ಸಂಶೋಧನಾ ಕೇಂದ್ರಗಳಿಲ್ಲ, ಮೆಡಿಕಲ್ ಕಾಲೇಜ್ ಜೊತೆ ಸಂಪರ್ಕ ಹೊಂದಿಲ್ಲ ಎಂಬುದು ವಿಶೇಷ. ಪ್ರಖರ್ ಆಸ್ಪತ್ರೆ ಈ ಮುಂಚೆ ಮಲೇರಿಯಾಗೆ ಆಯುರ್ವೇದ ಔಷಧಿ ಪ್ರಯೋಗದಲ್ಲಿ ಪಾಲ್ಗೊಂಡಿತ್ತು. ರಾಣಾ ಆಸ್ಪತ್ರೆ ಐವಿಎಫ್ ನಲ್ಲಿ ಪರಿಣತಿ ಪಡೆದಿದೆ, ಇಲ್ಲಿ ತನಕ ಯಾವುದೇ ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿಲ್ಲ, ಇದು ಮೊದಲ ಅನುಭವ.
# ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿ
ಒಮ್ಮೆ ಕ್ಲಿನಿಕಲ್ ಟ್ರಯಲ್ ಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡ ಬಳಿಕ, ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಆತನ ದೇಹದಲ್ಲಿ Antibodies ಉತ್ಪಾದನೆಯಾಗಿ ಕೊವಿಡ್ 19 ವೈರಸ್ ವಿರುದ್ಧ ಸಂಪೂರ್ಣ ಹೋರಾಡುವ ಪ್ರತಿನಿರೋಧಕ ಶಕ್ತಿ ಯಶಸ್ವಿಯಾಗಲು 28 ದಿನಗಳು ಅಗತ್ಯವಿದೆ.
ಆತುರವಾಗಿ ಡೇಟಾ ಪಡೆಯಲು ಸಾಧ್ಯವಿಲ್ಲ. ರೋಗಿಗಳ ವೈರಸ್ ವಿರುದ್ಧದ ನಿರೋಧಕ ಶಕ್ತಿ ಇತಿಹಾಸ, ಟ್ರಯಲ್ ಅವಧಿ ಹಾಗೂ ನಂತರದ ಸ್ಥಿತಿ ಗತಿ ಬಗ್ಗೆ ಸಮಗ್ರ ಮಾಹಿತಿಯನ್ನು ಸಮಿತಿ ಪರಿಶೀಲಿಸಲಿದೆ. ಕೇಂದ್ರ ಸಮಿತಿ ಅನುಮತಿ ನೀಡಿದ ಬಳಿಕ ಮಾರುಕಟ್ಟೆಗೆ ಲಸಿಕೆ ಬಿಡಬಹುದು ಎಂದು ಒಡಿಶಾದ ಮೆಡಿಕಲ್ ಸೈನ್ಸ್ ಎಸ್ ಯು ಎಂ ಆಸ್ಪತ್ರೆ ಎಪಿಡೆಮಿಯೊಲಾಜಿಸ್ಟ್ ಡಾ. ವೆಂಕಟ್ ರಾವ್ ಹೇಳಿದ್ದಾರೆ.
ಭಾರತದ ವಿಜ್ಞಾನಿ ಇ ಕೃಷ್ಣಾ ಸ್ಥಾಪಿಸಿದ ಭಾರತ್ ಬಯೋಟೆಕ್, ಹೈದರಾಬಾದಿನಲ್ಲಿ ಕೇಂದ್ರ ಕಚೆರಿ ಹೊಂದಿದೆ. ಈ ಹಿಂದೆ ಹಂದಿಜ್ವರ, ಎಚ್ 1 ಎನ್ 1 ವಿರುದ್ಧ HNVAC ಎಂಬ ವ್ಯಾಕ್ಸಿನ್ ಹೊರ ತಂದಿತ್ತು. ಈಗ ಕೃಷ್ಣಾ ಅವರ ನೇತೃತ್ವದಲ್ಲಿ ಕೋವ್ಯಾಕ್ಸಿನ್ ಲಸಿಕೆ ತಯಾರಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿವೆ.
ಮೊದಲ ಹಂತದಲ್ಲಿ 18 ರಿಂದ 55 ವರ್ಷದೊಳಗಿನ 50 ಮಂದಿ ಮೇಲೆ ಲಸಿಕೆ ಪ್ರಯೋಗವಾಗಲಿದೆ. ಈ ರೋಗಿಗಳಿಗೆ ಕಿಡ್ನಿ, ಹೃದಯ, ಶ್ವಾಸಕೋಶ, ಅನಿಯಮಿತ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಇರಬಾರದು ಎಂಬ ನಿಯಯವಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.