ಮುಂಬೈ: ಗೇಮ್ ಆಡಬೇಡ ಎಂದು ತಾಯಿ ಮೊಬೈಲನ್ನು ಕಿತ್ತುಕೊಂಡಿದಕ್ಕೆ 12 ವರ್ಷದ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಇತ್ತೀಚೆಗೆ ಯುವಜನತೆ ಮೊಬೈಲ್‍ಗೆ ಅಂಟಿಕೊಂಡೆ ಇರುತ್ತಾರೆ. ಅದರಲ್ಲಿ ಗೇಮ್ ಆಡುವ ಮತ್ತು ವಿಡಿಯೋ ಮಾಡುವ ಗೀಳಿಗೆ ಬಿದ್ದಿರುತ್ತಾರೆ. ಹೀಗೆ ಮೊಬೈಲ್ ಚಟಕ್ಕೆ ಬಿದ್ದ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಶಿವಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಇದ್ದ ಬಾಲಕ ತಾಯಿಯ ಫೋನಿನಲ್ಲಿ ಗೇಮ್ ಆಡುತ್ತಿದ್ದನು. ಇತ್ತೀಚೆಗೆ ಹೆಚ್ಚು ಮೊಬೈಲ್‍ಗೆ ಆಡಿಕ್ಟ್ ಆಗಿದ್ದ ಬಾಲಕ ದಿನದ ಬಹು ಸಮಯ ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ. ಹೀಗಿರುವಾಗ ತಾಯಿ ಮೊಬೈಲ್‍ನಲ್ಲಿ ಹೆಚ್ಚು ಸಮಯ ಆಟವಾಡಬೇಡ ಎಂದು ಬೈದಿದ್ದಾಳೆ. ಆದರೆ ಅದನ್ನು ಕೇಳದ ಬಾಲಕ ಮೊಬೈಲ್‍ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದ ಕೋಪಗೊಂಡ ತಾಯಿ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದಾಳೆ.
ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಾದ ಬಾಲಕ ಮನೆಯ ಮೂರನೇ ಮಹಡಿಯಲ್ಲಿರುವ ರೂಮ್‍ಗೆ ಹೋಗಿದ್ದಾನೆ. ಮೇಲಿನ ರೊಮ್‍ಗೆ ಹೋಗಿದ್ದಾನೆ ಎಂದ ತಿಳಿದ ತಾಯಿ 30 ನಿಮಿಷ ಬಿಟ್ಟು ಏನೂ ಮಾಡುತ್ತಿದ್ದಾನೆ ಎಂದು ನೋಡಲು ಹೋಗಿದ್ದಾರೆ. ಆದರೆ ಬಾಲಕ ತಾಯಿಯ ದುಪ್ಪಟ್ಟವನ್ನೇ ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆತ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದ.