ದೆಹಲಿ: ಕೇಂದ್ರ ಸಚಿವ ಸಂಪುಟವು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಉತ್ತೇಜನಕ್ಕಾಗಿ ಟೆಲಿಕಾಂ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳಿಗೆ ₹12,195 ಕೋಟಿ ಮೌಲ್ಯದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (production linked incentive – PLI) ನೀಡಲು ಅನುಮತಿ ನೀಡಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸೃತಿ ಇರಾನಿ ಮತ್ತು ರವಿಶಂಕರ್ ಪ್ರಸಾದ್ ಅವರು ಬುಧವಾರ ಸಚಿವ ಸಂಪುಟದ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೊದಲಿಗೆ ಮಾತನಾಡಿದ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, ಭಾರತವು ಉತ್ಪಾದನಾ ಹಬ್ ಆಗಬೇಕು ಎಂಬ ಆಶಯವನ್ನುನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ನಾವು ಸಾಕಷ್ಟು ಪ್ರಚಾರ ಮಾಡಿದ್ದೇವೆ. 2014ರಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕ ಎರಡು ಇತ್ತು, ಈಗ 270 ಆಗಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ಜಗತ್ತಿನ ಎರಡನೇ ದೊಡ್ಡ ದೇಶವಾಗಿದೆ. ಇದೇ ರೀತಿಯಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಯನ್ನು ಶುರು ಮಾಡಲಾಗಿದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನದ ಅರ್ಥ ಏನೆಂದರೆ ಮೊದಲು ಉದ್ಯೋಗ ಸೃಷ್ಟಿಸುವುದು ಮತ್ತು ಉತ್ಪಾದನೆ ಮಾಡುವುದಾಗಿದೆ. ಸರಳವಾಗಿ ಹೇಳುವುದಾದರೆ ರಫ್ತು ಮಾಡಿ, ಉದ್ಯೋಗ ಸೃಷ್ಟಿ ಮಾಡಿ ಆಮೇಲೆ ಪ್ರೋತ್ಸಾಹಧನ ನೀಡುವುದು ಎಂಬುದಾಗಿದೆ. ₹50,000 ಕೋಟಿ ಮೌಲ್ಯದ ಆಮದನ್ನು ಕಡಿಮೆ ಮಾಡಲು ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ (ಎಂಎಸ್‌ಎಂಇ) ಉತ್ತೇಜನ ನೀಡಲು ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (PLI) ಯೋಜನೆಯನ್ನು ಕೇಂದ್ರ ಸರ್ಕಾರ ಟೆಲಿಕಾಂ ಉಪಕರಣಗಳ ವಲಯಕ್ಕೂ ವಿಸ್ತರಿಸಿದೆ.
ಟೆಲಿಕಾಂ ಉಪಕರಣ ವಲಯಕ್ಕಿರುವ ಪಿಎಲ್‌ಐ ಯೋಜನೆಯ ಪರಿಣಾಮ ಮುಂದಿನ 5 ವರ್ಷಗಳಲ್ಲಿ ಈ ವಲಯದಲ್ಲಿ ₹ 2,44,200 ಕೋಟಿ ಮೌಲ್ಯದ ಉತ್ಪಾದನೆ ಏರಿಕೆ, ₹ 1,95,360 ಕೋಟಿ ಮೌಲ್ಯದ ರಫ್ತು, ₹ 40,000 ಹೊಸ ಉದ್ಯೋಗ ಮತ್ತು ₹ 17,000 ಕೋಟಿ ಮೌಲ್ಯದ ತೆರಿಗೆ ಆದಾಯದ ನಿರೀಕ್ಷೆ ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.