ಮುಂಬೈ: ಇಂದು ಬೆಳಗ್ಗೆ ಸುರಿದ ವರ್ಷಧಾರೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದ್ದು, ಎಲ್ಲಿ ನೋಡಿದಲ್ಲಿ ನೀರು ಕಾಣಿಸುತ್ತಿದೆ. ರಸ್ತೆಯಲ್ಲಿ ನೀರು ಹರಿಯುತ್ತಿರೋದರಿಂದ ವಾಹನ ಸವಾರರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಾಯ್ತು.
ಹವಾಮಾನ ಇಲಾಖೆ ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ ಮೂರು ಮೀಟರ್ ಗಿಂತ ಎತ್ತರ ಅಲೆಗಳು ಸೃಷ್ಟಿಯಾಗಲಿವೆ. ಹಾಗಾಗಿ ಸಮುದ್ರ ತೀರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ನಗರದ ವಿಲೆ ಪಾರ್ಲೆ, ಸಂತಾಕ್ರೂಜ್, ಸಾಯನ್, ಕಿಂಗ್ಸ್ ಸರ್ಕಲ್, ಖಾರ್, ಹಿಂದಮಾತಾ ರಸ್ತೆಗಳಲ್ಲಿ ದೊಡ್ಡ ಟ್ರಾಫಿಕ್ ಉಂಟಾಗಿದೆ.
ಮುಂಬೈ, ಥಾಣೆ ಸೇರಿದಂತೆ ಕೊಂಕಣ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ. ಈ ಭಾಗದ ಕೆಲ ಪ್ರದೇಶಗಳಲ್ಲಿ 200 ಮಿಲಿ ಮೀಟರ್ ಗಿಂತ ಅಧಿಕ ಮಳೆಯ ನಿರೀಕ್ಷೆ ಇದೆ. ಗುರುವಾರದ ಬಳಿಕ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಕೊಲಾಬಾ ಸೆಂಟರ್ ನಲ್ಲಿ 121.6 ಮಿಲಿ ಮೀಟರ್ ಮಳೆಯಾಗಿದೆ. ಸಂತಾಕ್ರೂಜ್ ನಲ್ಲಿ 96.6 ಮಿಲಿ ಮೀಟರ್, ರತ್ನಗಿರಿಯಲ್ಲಿ 101.3 ಮಿಲಿ ಮೀಟರ್ ಮತ್ತು ಅಲಿಭಾಗ್ 122.6 ಮಿಲಿ ಮೀಟರ್ ಮಳೆಯಾಗಿದೆ.