ಬೆಳಗಾವಿ : ನಮ್ಮ ತಂದೆ ಐದು ವರ್ಷ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಯಾವುದೇ ಬದಲಾವಣೆ ಇಲ್ಲ. ಜನವರಿ ತಿಂಗಳಿನಲ್ಲಿ ಹೈಕಮಾಂಡ್ ಬದಲಾವಣೆ ಮಾಡುತ್ತಾರೆ ಎನ್ನುವುದು ಎಷ್ಟು ಸರಿ? ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ. ಸಿದ್ದರಾಮಯ್ಯನವರೇ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸ್ಪಷ್ಟನೆ ನೀಡಿದ್ದಾರೆ.
ಅವರು ಇಂದು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಮಾಧ್ಯಮದವರ ಜೊತೆ ಮಾತನಾಡುತ್ತಾ, ‘ಯಾವುದೇ ಬದಲಾವಣೆ ಆಗುವುದಿಲ್ಲ. ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವುದರಿಂದ ಏನು ತಪ್ಪು? ಸಿಎಂ, ಡಿಸಿಎಂ ಇಬ್ಬರಲ್ಲಿಯೂ ಒಗ್ಗಟ್ಟಿದೆ. ಗೊಂದಲ ಇತ್ತು, ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿದರೂ ನಾನು ಬದ್ಧ ಎಂದು ಸಿಎಂ ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.
ಅವಿಶ್ವಾಸ ಮಂಡಿಸಲು ಬಿಜೆಪಿಗೆ ಎಲ್ಲಿದೆ ಸಾಮರ್ಥ್ಯ? ಸದನದಲ್ಲಿ ಅವಿಶ್ವಾಸ ಮಂಡಿಸುವುದಾಗಿ ಬಿಜೆಪಿಯ ಕೆಲ ನಾಯಕರು ಗುಸುಗುಸು ಶುರು ಮಾಡಿದ್ದಾರೆ. ಆ ಪ್ರಯತ್ನಕ್ಕೆ ಕೈ ಹಾಕಿದರೆ ಮುಖಭಂಗ ಎದುರಿಸುತ್ತಾರೆ. ಆ ಸಾಮರ್ಥ್ಯ ಅವರಿಗೆಲ್ಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. ನಮಗೆ ಬಹುಮತ ಇದೆ ಅನ್ನೋದು ಅವರಿಗೂ ಗೊತ್ತಿದೆ. ಸುಮ್ಮನೆ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಜನರ ವಿಷಯಗಳ ಬಗ್ಗೆ ಚರ್ಚಿಸಲು ಅಧಿವೇಶನ ನಡೆಯುತ್ತಿದೆ. ಅದನ್ನು ಬಿಟ್ಟು ರಾಜಕೀಯ ಮಾಡಿದರೆ ಅನಗತ್ಯ ಖರ್ಚು ಮತ್ತು ಸಮಯ ವ್ಯರ್ಥವಾಗುತ್ತದೆ. ಪ್ರತಿಪಕ್ಷವಾಗಿ ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತಾರೋ ಅಥವಾ ವ್ಯರ್ಥ ಮಾಡಿಕೊಳ್ಳುತ್ತಾರೋ ಎಂಬುದನ್ನು ಅವರೇ ನಿರ್ಧರಿಸಲಿ ಎಂದರು.
Laxmi News 24×7