ಬೆಳಗಾವಿ: ಗಳಲೆ ರೋಗದ ಸೋಂಕಿನಿಂದ ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿವೆ. ಮೃಗಾಲಯದಲ್ಲಿದ್ದ ಇನ್ನಿತರ ಪ್ರಾಣಿಗಳಿಗೆ ಸೋಂಕು ಪಸರಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ವಿಧಾನಪರಿಷತ್ನಲ್ಲಿಂದು ಪ್ರತಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಕಿರು ಮೃಗಾಲಯದಲ್ಲಿ ನವೆಂಬರ್ 13ರಿಂದ 17ರ ವರೆಗೆ ಒಟ್ಟು 31 ಕೃಷ್ಣಮೃಗಗಳು ಸಾವಿಗೀಡಾಗಿವೆ. ಮೃಗಾಲಯದ ವೈದ್ಯರು, ಪಶು ಸಂಗೋಪನಾ ಇಲಾಖೆಯ ಸ್ಥಳೀಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ಪಶುವೈದ್ಯಕೀಯ ಜೈವಿಕ ಸಂಸ್ಥೆಗೆ ಮಾದರಿ ಕಳಿಸಿದ್ದರು. ಎಲ್ಲ ಕೃಷ್ಣಮೃಗಗಳೂ ಗಳಲೆ ರೋಗದಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದರು.
ತಮಗೆ ಕೃಷ್ಣಮೃಗಗಳ ಸಾವಿನ ವಿಷಯ ತಿಳಿದ ಕೂಡಲೇ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕಳುಹಿಸಿದ್ದು, 7 ಬದುಕುಳಿದಿವೆ ಎಂದ ಅವರು, ಈ ಸೋಂಕು ಮೃಗಾಲಯದ ಬೇರೆ ಯಾವುದೇ ಪ್ರಾಣಿಗಳಿಗೆ ಪಸರಿಸದಂತೆ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿತ್ತು. ಕಟ್ಟುನಿಟ್ಟಾಗಿ ನೈರ್ಮಲ್ಯ ಕ್ರಮ ಕೈಗೊಳ್ಳಲಾಯಿತು. ಇದು ಕೈಮೀರಿ ಸಂಭವಿಸಿರುವ ಸಾವು, ಮೇಲ್ನೋಟಕ್ಕೆ ಕರ್ತವ್ಯಲೋಪ, ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ವಿವರಿಸಿದರು.
ಸೋಂಕು ಬಂದ 8ರಿಂದ 24 ಗಂಟೆಗಳಲ್ಲಿ ಸಾವು: ಚಿಗುರು ತಿನ್ನುವ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಹೊರನೋಟಕ್ಕೆ ಸೋಂಕಿನ ಲಕ್ಷಣವೂ ಕಾಣುವುದಿಲ್ಲ. ಈ ಸೋಂಕು ಬಂದ 6ರಿಂದ 24 ಗಂಟೆಗಳಲ್ಲಿ ಅಥವಾ 8ರಿಂದ 24 ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ. ಸೋಂಕು ತಗುಲಿದ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸುವ ಕಾರಣ ಹೆಚ್ಚಿನ ಸಂಖ್ಯೆ ಕೃಷ್ಣಮೃಗಗಳು ಮೃತಪಟ್ಟಿವೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿದ್ದ 38 ಕೃಷ್ಣಮೃಗಳ ಪೈಕಿ 31 ಕೃಷ್ಣಮೃಗಗಳು ಸಾವಿಗೀಡಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿರುವ ಎಲ್ಲಾ ಮೃಗಾಲಯಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.
Laxmi News 24×7