ಕೌಜಲಗಿ (ತಾ:ಗೋಕಾಕ): ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ
ಕೌಜಲಗಿ(ತಾ:ಗೋಕಾಕ):ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲೆಯಾಗಿಸಿ, ಗೋಕಾಕ ತಾಲ್ಲೂಕಿನ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಕೌಜಲಗಿ ಕನ್ನಡ ಕೌಸ್ತುಭ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ, ಕನ್ನಡ ಕೌಸ್ತುಭದ ಅಧ್ಯಕ್ಷ – ಸಾಹಿತಿ ಡಾ ರಾಜು ಕಂಬಾರ ಮಾತನಾಡಿ,
ಕೌಜಲಗಿ ಪಟ್ಟಣವು 52 ವರ್ಷಗಳಿಂದ ತಾಲ್ಲೂಕು ರಚನೆಗಾಗಿ ಹೋರಾಡುತ್ತಿದೆ. ತಾಲ್ಲೂಕು ಪುನರ್‌ವಿಂಗಡಣಾ ಸಮಿತಿಗಳಾದ ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು ಕೌಜಲಗಿ ಪಟ್ಟಣವನ್ನು ತಾಲ್ಲೂಕಾಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಸರ್ಕಾರ ನೇಮಿಸಿದ ತಾಲ್ಲೂಕು ಪುನರ್‌ವಿಂಗಡಣಾ ಆಯೋಗಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ದೊಡ್ಡ ದೊಡ್ಡ ತಾಲ್ಲೂಕುಗಳನ್ನು ವಿಭಜಿಸಿ ನೂತನ ತಾಲ್ಲೂಕುಗಳನ್ನು ರಚಿಸಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆಂಬ ಕನಸ್ಸನ್ನು ಕಂಡಿದ್ದ ಸನ್ಮಾನ್ಯ ದಿವಂಗತ ಮುಖ್ಯಮಂತ್ರಿ ಡಿ.ದೇವರಾಜ ಅರಸರು ಮೊಟ್ಟಮೊದಲ ಬಾರಿಗೆ ಎಂ.ವಾಸುದೇವರಾವ್ (ಏಕ ಸದಸ್ಯ) ತಾಲ್ಲೂಕು ಪುನರ್‌ವಿಂಗಡಣಾ ಆಯೋಗವನ್ನು 1973 ರಲ್ಲಿ ರಚಿಸಿದರು. ಅವರಿಗೆ ದಿನಾಂಕ: 11-10-1973 ರಂದು ಕೌಜಲಗಿ ತಾಲ್ಲೂಕ ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ. ಅನಂತರದಲ್ಲಿ ರಚನೆಗೊಂಡ ಶ್ರೀ ಟಿ.ಎಂ.ಹುಂಡೇಕರ (ಏಕ ಸದಸ್ಯ) ಆಯೋಗಕ್ಕೆ ದಿನಾಂಕ: 19-05-1986 ರಂದು ಮತ್ತು ಪಿ.ಸಿ.ಗದ್ದಿಗೌಡರ ಮತ್ತು ಅನಂತರದ ಎಲ್ಲ ಆಯೋಗಗಳಿಗೂ ಮನವಿ ಸಲ್ಲಿಕೆಯಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು, ನಿಪ್ಪಾಣಿ, ಕಾಗವಾಡ ಜೊತೆಯಲ್ಲಿಯೇ ತಾಲ್ಲೂಕಿಗಾಗಿ ಹೋರಾಡುತ್ತ ಬಂದಿದ್ದರೂ ಕೌಜಲಗಿ ತಾಲ್ಲೂಕಾಗದೇ ಹಾಗೇ ಉಳಿದಿದೆ. ಯರಗಟ್ಟಿಯನ್ನು ತಾಲ್ಲೂಕು ಕೇಂದ್ರ ಎಂದು ಸಚಿವ ಸಂಪುಟದಲ್ಲಿಯೇ ಅನುಮೋದಿಸಲಾಗಿದೆ. ಆದರೆ ಕೌಜಲಗಿ ಮಾತ್ರ ಹಾಗೇ ಇದೆ.
ಕನಾಟಕದಲ್ಲಿಯೇ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿಯೇ ಕೇವಲ ಹೋಬಳಿ ಕೇಂದ್ರ ಒಂದನ್ನೇ ಕಿತ್ತೂರು ತಾಲ್ಲೂಕಾಗಿಸಿದ ಉದಾರಣೆಗಳಿವೆ. ರಾಜ್ಯದಲ್ಲಿಯೇ ಅತ್ಯಂತ ಚಿಕ್ಕದಾದ ತಾಲ್ಲೂಕು ಕಲಬುರ್ಗಿ ಜಿಲ್ಲೆಯ ಶಹಬಾದ ಕೆಲವೇ ಗ್ರಾಮಗಳನ್ನೊಳಗೊಂಡ ತಾಲ್ಲೂಕು ಕೇಂದ್ರವಾಗಿದೆ. ಆದುದರಿಂದ ಕೌಜಲಗಿ ಹೋಬಳಿಯನ್ನೊಳಗೊಂಡು ಪಕ್ಕದ ಮೂಡಲಗಿ, ರಾಮದುರ್ಗ, ಯರಗಟ್ಟಿ ತಾಲೂಕಿನ ಗಡಿ ಗ್ರಾಮಗಳನ್ನು ಸೇರ್ಪಡಿಸಿ ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ರಚಿಸಬೇಕೆಂಬುದು ಕನ್ನಡ ಕೌಸ್ತುಭ ಸಂಘಟನೆ ಈ ಮೂಲಕ ಸರಕಾರವನ್ನು ಒತ್ತಾಯಪಡಿಸಿದೆ.
Laxmi News 24×7