ಬೆಳಗಾವಿ: “ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳುವುದಿದ್ದರೆ ಉಳಿಸಿಕೊಳ್ಳಲಿ. ಇಲ್ಲದಿದ್ದರೆ ಎಲ್ಲರೂ ಸೇರಿಕೊಂಡು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ನಾಲ್ಕೈದು ದಿನಗಳಲ್ಲಿ ಈ ಕಗ್ಗಂಟು ಬಗೆಹರಿಯದಿದ್ದರೆ ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ಇದರಿಂದ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ. ಆರು ತಿಂಗಳಾದ ಬಳಿಕ ಮತ್ತೆ ಚುನಾವಣೆಗೆ ಹೋಗೋಣ” ಎಂದು ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರದಲ್ಲಿ ರಾಜಕೀಯ ಸ್ಟಂಟ್ ನಡೆಯುತ್ತಿದೆ. ಸಿಎಂ, ಡಿಸಿಎಂ ಮಧ್ಯೆ ನಾ ಕೊಡೆ, ನೀ ಬಿಡೆ ಎಂಬಂತಾಗಿದೆ. ನಾನು ಸಿಎಂ ಸ್ಥಾನ ಕೊಡುವುದಿಲ್ಲ, ನಾನು ಸಿಎಂ ಸ್ಥಾನ ಬಿಡುವುದಿಲ್ಲ ಎಂಬ ಹಗ್ಗಜಗ್ಗಾಟ ಶುರುವಾಗಿದೆ. ಇದು ಪರೋಕ್ಷವಾಗಿ ಶಾಸಕರ ನಡುವೆ ನಡೆಯುತ್ತಿತ್ತು. ಈಗ ನೇರಾನೇರ ಅವರಿಬ್ಬರ ನಡುವೆಯೇ ಏರ್ಪಟ್ಟಿದೆ. ಟ್ವೀಟ್ ವಾರ ನಡೆಯುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ವೇದಿಕೆ ಹಂಚಿಕೊಳ್ಳುತ್ತಿಲ್ಲ. ಆಡಳಿತ ವ್ಯವಸ್ಥೆ ಕುಸಿದಿದೆ. ಅಭಿವೃದ್ಧಿ ಕುಂಠಿತವಾಗಿದೆ. ಮೆಕ್ಕೆಜೋಳ, ಹೆಸರು, ಉದ್ದು ಸೇರಿ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಹೋರಾಟಗಳಿಗೆ ಸ್ಪಂದನೆ ಸಿಗುತ್ತಿಲ್ಲ” ಎಂದು ದೂರಿದರು.
ಸರ್ಕಾರ ಸತ್ತ ಹೆಣವಾಗಿದೆ. ಸರ್ಕಾರ ಉಳಿಸಿಕೊಳ್ಳಬೇಕೋ, ಬಿಡಬೇಕೋ ಎಂಬುದನ್ನು ಕಾಂಗ್ರೆಸ್ ಪಕ್ಷದವರು ವಿಚಾರ ಮಾಡಬೇಕು. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ. ರಾಜ್ಯದಲ್ಲಿ ಸರ್ಕಾರದ ಅಸ್ತಿತ್ವ ಇಲ್ಲದ ಶೂನ್ಯ ಸ್ಥಿತಿ ನಿರ್ಮಾಣವಾಗಿದೆ. ಇವತ್ತು, ನಾಳೆ ಇದು ಸರಿ ಹೋಗುತ್ತಿದೆ ಅಂತಾ ಅನಿಸುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ 29ಕ್ಕೆ ಕರೆಯುತ್ತೇನೆ ಅಂತಾ ಹೇಳಿದೆ. ಅಲ್ಲಿ ಏನಾಗುತ್ತೋ ಗೊತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿಗೆ ನೇರವಾಗಿ ಮಾತನಾಡಲು ಆಗುತ್ತಿಲ್ಲ. ಹಾಗಾಗಿ, ಟ್ವೀಟ್ ವಾರ್ ಮಾಡುತ್ತಿದ್ದಾರೆ. ಐದಾರು ಹಿರಿಯರ ಜೊತೆಗೆ ಆಗಿದ್ದ ಮಾತುಕತೆ ಹೊರಗೆ ಬರಬೇಕು ಅಂತಾ ಡಿಕೆಶಿ ಹೇಳುತ್ತಾರೆ. ಈ ಸಂಬಂಧ ಇಬ್ಬರೂ ಒಟ್ಟಿಗೆ ಕುಳಿತು ಸುದ್ದಿಗೋಷ್ಠಿ ನಡೆಸಿ ಹೇಳಬೇಕು” ಎಂದು ಶೆಟ್ಟರ್ ಒತ್ತಾಯಿಸಿದರು.
“ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಅವರು ಇದರಲ್ಲಿ ನಾನು ಅಸಹಾಯಕನಾಗಿದ್ದೇನೆ, ಹೈಕಮಾಂಡ್ ನೋಡಿಕೊಳ್ಳುತ್ತದೆ ಅಂತಾ ಹೇಳುತ್ತಾರೆ. ಹಾಗಾದರೆ, ನೀವು ಯಾರು?, ಖರ್ಗೆ ಅವರು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರು. ನೀವೇ ಈ ರೀತಿ ಅಸಹಾಯಕತೆ ವ್ಯಕ್ತಪಡಿಸಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬನ್ನಿ” ಎಂದು ಛೇಡಿಸಿದರು.
Laxmi News 24×7