ಬೆಂಗಳೂರು(ಜ. 01): ಇಂದಿನಿಂದ ಎಸ್ಸೆಸ್ಸೆಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ತರಗತಿಗಳು ಆರಂಭವಾಗುತ್ತಿವೆ. ಬಹಳಷ್ಟು ವಿದ್ಯಾರ್ಥಿಗಳು ಬಸ್ಸುಗಳನ್ನೇ ಅವಲಂಬಿಸಿದ್ದು ಹೊಸ ವರ್ಷದಲ್ಲಿ ಮಕ್ಕಳಿಗೆ ಪಾಸ್ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕವೇ ಸದ್ಯ ಓಡಾಡಲು ಅವಕಾಶ ಮಾಡಿಕೊಟ್ಟಿದೆ. 2019-20ನೇ ಸಾಲಿನಲ್ಲಿ ವಿತರಿಸಲಾಗಿದ್ದ ಸ್ವಾರ್ಟ್ಕಾರ್ಡ್ ಬಸ್ ಪಾಸ್ನಲ್ಲೇ ಈ ಎರಡು ತರಗತಿಯ ಮಕ್ಕಳು ಉಚಿತವಾಗಿ ಬಿಎಂಟಿಸಿ ಬಸ್ನಲ್ಲಿ ಓಡಾಡಬಹುದಾಗಿದೆ. ಮುಂದಿನ ಆದೇಶದವರೆಗೂ ಈ ಸೌಲಭ್ಯ ಮುಂದುವರಿಯಲಿದೆ.
ಬಸ್ನಲ್ಲಿ ನಿರ್ವಾಹಕರು ಕೇಳಿದಾಗ ಮಕ್ಕಳು ತಮ್ಮ ಹಿಂದಿನ ವರ್ಷದ ಬಸ್ ಪಾಸ್ ಜೊತೆಗೆ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಹಾಗೂ ಶುಲ್ಕ ಪಾವತಿಸಿದ ರಸೀದಿಯನ್ನ ತೋರಿಸಬೇಕಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಹೊಸ ವರ್ಷದ ಕೊಡುಗೆ ನೀಡಿದೆ.ಇದೇ ವೇಳೆ, ಒಂಬತ್ತು ತಿಂಗಳ ಬಳಿಕ ರಾಜ್ಯಾದ್ಯಂತ ಶಾಲೆ ಮತ್ತು ಕಾಲೇಜು ಬಾಗಿಲು ತೆರೆದಿವೆ. ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಇವತ್ತು ಮೊದಲ ದಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇದರ ಮಧ್ಯೆ ಬಾಗಿಲು ತೆರೆದಿರುವ ಎಲ್ಲಾ ಶಾಲೆ, ಕಾಲೇಜುಗಳಲ್ಲೂ ಬಹಳಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸ್ ಇತ್ಯಾದಿ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
Laxmi News 24×7