ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಬೆಳ್ಳಿಚಡವಿನಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಸರ್ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಪರಾರಿಯಾಗುತ್ತಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಪೊಲೀಸರು 12 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯಲ್ಲಿ ಆರೋಪಿ ಲಾರಿ ಚಾಲಕ ಅಬ್ದುಲ್ಲಾ (40 ವರ್ಷ) ಕಾಲಿಗೆ ಗುಂಡೇಟು ತಗಲಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಐಸರ್ ಲಾರಿಯಲ್ಲಿ ಸುಮಾರು 12 ಜಾನುವಾರುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಪೊಲೀಸರು ವಾಹನವನ್ನು ತಡೆಯಲು ಯತ್ನಿಸಿದಾಗ, ಆರೋಪಿಯು ವಾಹನ ನಿಲ್ಲಿಸಲು ನಿರಾಕರಿಸಿ ಸುಮಾರು 10 ಕಿಮೀ ದೂರವರೆಗೆ ಓಡಿಸಿದ್ದಾನೆ. ಆಗ ಪೊಲೀಸರು ಸುಮಾರು 10 ಕಿಮೀ ದೂರ ವಾಹನವನ್ನು ಬೆನ್ನಟ್ಟಿದ್ದಾರೆ.
ಲಾರಿಯನ್ನು ಅಡ್ಡಗಟ್ಟಿದ ಪೊಲೀಸ್ ಜೀಪಿಗೆ ಆರೋಪಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಆಗ ಸ್ಥಳದಲ್ಲಿದ್ದ ಪಿಎಸ್ಐ, ಆತ್ಮರಕ್ಷಣಾರ್ಥವಾಗಿ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ. ಘಟನೆಯ ಸಮಯದಲ್ಲಿ ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಅಬ್ದುಲ್ಲಾ ಮೂಲತಃ ಕೇರಳದ ಕಾಸರಗೋಡಿನವನು. ಗಾಯಗೊಂಡ ಆರೋಪಿ ಅಬ್ದುಲ್ಲನನ್ನು ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಆರೋಪಿ ವಾಹನದ ಡ್ರೈವರ್ನನ್ನು ಹಿಡಿಯಲು ಹೋದಾಗ, ಅವನಲ್ಲಿದ್ದ ಚೂರಿಯಿಂದ ಪೊಲೀಸರಿಗೆ ಚುಚ್ಚಲು ಬಂದಿದ್ದಾನೆ. ಆ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಎರಡನೇ ಗುಂಡು ಹಾರಿಸಿದ್ದಾರೆ. ಅಬ್ದುಲ್ಲಾ ವಿರುದ್ಧ ಕಳೆದ ವರ್ಷ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿ (ಕೇಸ್ ನಂ. 33/2025) ಪ್ರಕರಣ ದಾಖಲಾಗಿರುವುದು ಬಹಿರಂಗವಾಗಿದೆ. ಇದೀಗ ನಡೆದ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಾರಂಭವಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಎಸ್‌ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.