ಬೆಳಗಾವಿ: ಎಂಪಿ, ಎಂಎಲ್ಎ ಚುನಾವಣೆ ಬಿಟ್ಟರೆ ಎಲ್ಲ ಚುನಾವಣೆಗಳಿಗೆ ರೆಸಾರ್ಟ್, ಪ್ರವಾಸ ರಾಜಕೀಯ ಅನ್ವಯಿಸುತ್ತದೆ. ಒಟ್ಟಿಗೆ ಇರೋಣ ಎನ್ನುವ ಕಾರಣಕ್ಕೆ ಎಲ್ಲರೂ ಹೋಗಿದ್ದಾರೆ. ಇನ್ನುಳಿದ ಏಳು ಕ್ಷೇತ್ರಗಳಲ್ಲಿ ನಾವು ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಮಾತನಾಡಿದ ಅವರು, ಕಿತ್ತೂರಿನಲ್ಲಿ ಯಾರ ಮೇಲೆ ಮತದಾರರ ಪ್ರೀತಿ ಹೆಚ್ಚಿದೆ ಅವರು ಗೆಲ್ಲುತ್ತಾರೆ. ಮತದಾರರು ಅದನ್ನು ನಿರ್ಧರಿಸಬೇಕು. ಫಲಿತಾಂಶ ಬರುವವರೆಗೆ ಕಾಯಬೇಕಷ್ಟೇ. ಕೆಲವು ಕಡೆ ಯಾರೇ ಗೆದ್ದರೂ ನಮ್ಮವರೇ. ಮತ್ತೊಂದಿಷ್ಟು ಕಡೆ ವಿರೋಧಿಗಳಿದ್ದಾರೆ ಎಂದರು.
ಚರ್ಚೆಗಳಿಗೆ ಟ್ಯಾಕ್ಸ್, ಜಿಎಸ್ಟಿ ಇರುವುದಿಲ್ಲ: ಲಿಂಗಾಯತರನ್ನು ಒಡೆದು ಆಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಆ ರೀತಿ ಹೇಳಿದವರು ಯಾರು.? ಚರ್ಚೆಗಳಿಗೆಲ್ಲಾ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಚರ್ಚೆಗೆ ಟ್ಯಾಕ್ಸ್, ಜಿಎಸ್ಟಿ ಇರುವುದಿಲ್ಲ ಎಂದು ಟಾಂಗ್ ನೀಡಿದರು.
ಎಲ್ಲರಿಗೂ ಸೋಲಿನ ಭಯ ಇದ್ದೆ ಇರುತ್ತದೆ. ಭಯ ಇದ್ದರೆ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ. ಇನ್ನು ಎಲ್ಲ ಚುನಾವಣೆಗಳಲ್ಲಿ ಕ್ರಾಸ್ ವೋಟಿಂಗ್ ನಡೆದೇ ನಡೆಯುತ್ತದೆ. ಮೊದಲಿನಿಂದಲೂ ಈ ಪದ್ಧತಿ ಇದೆ. ಈ ಕಡೆ ಇದ್ದವರು ಆ ಕಡೆ, ಆ ಕಡೆ ಇದ್ದವರು ಈ ಕಡೆ ವೋಟ್ ಹಾಕುತ್ತಾರೆ. ಹಾಗಾಗಿ, ನಿಪ್ಪಾಣಿ, ಹುಕ್ಕೇರಿ, ರಾಮದುರ್ಗ ಸೇರಿ ಎಲ್ಲಾ ಕಡೆ ಕ್ರಾಸ್ ವೋಟಿಂಗ್ ಆಗಬಹುದು ಎಂದು ಸತೀಶ ಜಾರಕಿಹೊಳಿ ಸುಳಿವು ಬಿಟ್ಟುಕೊಟ್ಟರು.
ಕಿತ್ತೂರಿನಲ್ಲಿ ಯಾಕೆ ಸಂಧಾನ ಯಶಸ್ವಿ ಆಗಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ಕೆಲವು ಕ್ಷೇತ್ರಗಳಲ್ಲಿ ಅನಿವಾರ್ಯವಾಗಿ ಚುನಾವಣೆ ಆಗುತ್ತದೆ. ಇದನ್ನು ಮುಂಚೆಯೇ ಹೇಳಿದ್ದೆ. ಮತದಾರರು ಹೆಚ್ಚು ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಗೆಲ್ಲುತ್ತಾರೆ ಎಂದರು.
ಹುಕ್ಕೇರಿಯಲ್ಲಿ ಮತದಾನದ ಹಕ್ಕು ತೆಗೆದುಕೊಂಡವರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಿ ಮತ ಚಲಾಯಿಸುತ್ತಾರೆ. ಹಾಗಾಗಿ, ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಆದರೆ, ಗೆಲ್ಲಲು ಎಲ್ಲ ರೀತಿ ಪ್ರಯತ್ನಿಸುತ್ತೇವೆ. ಇನ್ನು ಹುಕ್ಕೇರಿ ಕೆಇಬಿ ಚುನಾವಣೆ ಒಂದು ತಾಲೂಕಿಗೆ ಸಿಮೀತವಾಗಿದೆ. ಡಿಸಿಸಿ ಬ್ಯಾಂಕ್ ಜಿಲ್ಲಾ ಮಟ್ಟದ ಚುನಾವಣೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದು ಸತೀಶ ಅಭಿಪ್ರಾಯಪಟ್ಟರು.
ಅಶೋಕ ಪಟ್ಟಣ ಅವರಿಗೆ ಸೋಲಿನ ಭಯ ಇದ್ದಿದ್ದರೆ ಅವರೇ ಗೆಲ್ಲುತ್ತಿದ್ದರು. ಅ.19ರಂದು ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದ್ದೆವು. ಆದರೂ ಯಾಕೋ ಅವರು ರಿಸ್ಕ್ ಬೇಡ ಅಂತಾ ನಾಮಪತ್ರ ಹಿಂಪಡೆದಿದ್ದಾರೆ. ರಾಮದುರ್ಗದಲ್ಲಿ ಈಗಲೂ ಗೊಂದಲ ಇದೆ. ಕೊನೆ ಕ್ಷಣದಲ್ಲಿ ಮುಖಂಡರು ಯಾವ ರೀತಿ ಗೊಂದಲ ಬಗೆಹರಿಸುತ್ತಾರೆ ನೋಡೋಣ ಎಂದು ಪ್ರತಿಕ್ರಿಯೆ ನೀಡಿದರು.
Laxmi News 24×7