ಮೈಸೂರು: ನಾನೂ ಸಿಎಂ ಸಿದ್ದರಾಮಯ್ಯನವರ ಡಿನ್ನರ್ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ಆಗಿಲ್ಲ, ಇದೆಲ್ಲ ಮಾಧ್ಯಮದವರ ಸೃಷ್ಟಿ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಡಿನ್ನರ್ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಆಗಿಲ್ಲ. ಎಲ್ಲರೂ ಊಟಕ್ಕೆ ಮಾತ್ರ ಸೇರಿದ್ದೆವು. ಇನ್ನು, ನವೆಂಬರ್ ಕ್ರಾಂತಿ ಎಂಬುದು ಮಾಧ್ಯಮದವರ ಸೃಷ್ಟಿ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ವಿಚಾರವಾಗಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಆಗುತ್ತಿದೆ. 2014ಕ್ಕಿಂತ ಹಿಂದೆ ಈ ರೀತಿ ಇರಲಿಲ್ಲ. ಐಡಿಯಾಲಾಜಿ ವಿಚಾರಕ್ಕೆ ಯಾರನ್ನೂ ಹೆದರಿಸಬಾರದು ಎಂದರು.
ಬಾಲಕಿಯ ಹತ್ಯೆ ಪ್ರಕರಣ: ದಸರಾ ಸಂದರ್ಭದಲ್ಲಿ ಬಲೂನ್ ವ್ಯಾಪರಕ್ಕೆ ಬಂದಿದ್ದ ಕುಟುಂಬವೊಂದರ 9 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾವು ನೊಂದ ಕುಟುಂಬದ ಜೊತೆ ನಿಲ್ಲುತ್ತೇವೆ. ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚೆ ನಡೆದಿದೆ. ಆ ಕುಟುಂಬಕ್ಕೆ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ಇರುವ ಎಲ್ಲ ಸೌಲಭ್ಯವನ್ನು ಕೊಡಿಸುತ್ತೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ: ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಈಗಾಗಲೇ 24 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 15 ಸಾವಿರ ಮಂದಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 17ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಲಿರುವ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗಿಯಾಗಲಿದ್ದಾರೆ. ಯುವನಿಧಿ ಯೋಜನೆಯಡಿ ಈಗಾಗಲೇ ನೋಂದಣಿಯಾಗಿರುವ ಮೈಸೂರು ವಿಭಾಗದ 43,577 ಫಲಾನುಭವಿಗಳ ಜೊತೆಗೆ ಇತರ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಅವಕಾಶ ಹೊಂದಿರುವ ಉದ್ಯೋಗದಾತರೊಂದಿಗೆ ನೇರ ಭೇಟಿಗಾಗಿ ಅವಕಾಶ ಕಲ್ಪಿಸಲು ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದುವರೆಗೂ 221 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದು, ಮತ್ತಷ್ಟು ಕಂಪನಿಗಳು ಸೇರ್ಪಡೆ ಆಗಲಿವೆ ಎಂದು ಹೇಳಿದರು.
ಸಿಎಂ ಡಿನ್ನರ್ ಪಾರ್ಟಿ: ಸಿಎಂ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳೊಂದಿಗೆ ಏರ್ಪಡಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಪ್ರಮುಖವಾಗಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಾವೇರಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಜಮೀರ್ ಅಹಮದ್ ಖಾನ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ್ ವೈದ್ಯ ಹೊರತುಪಡಿಸಿ ಉಳಿದೆಲ್ಲ ಸಚಿವರು ಪಾಲ್ಗೊಂಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಡಿನ್ನರ್ ಸಭೆಗೆ ಆರಂಭದಲ್ಲೇ ಆಗಮಿಸಿ, ಕೆಲಹೊತ್ತು ಇದ್ದು ಬಳಿಕ ತುರ್ತು ಹಿನ್ನೆಲೆಯಲ್ಲಿ ಬೇಗ ಸಭೆಯಿಂದ ತೆರಳಿದರು. ಸಿಎಂ ಸಿದ್ದರಾಮಯ್ಯ ಕೆಲ ಸಚಿವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಇಲಾಖೆ ವಿಚಾರ, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
Laxmi News 24×7