ಬೆಂಗಳೂರು: ಸಿಎಂ ಬದಲಾವಣೆ ಬಗ್ಗೆ ಈಗಲೂ ಶಾಸಕರ ಅಭಿಪ್ರಾಯ ಪಡೆಯಬಹುದು. ಶಾಸಕರ ಅಭಿಪ್ರಾಯ ಬೇಡ ಅಂತಲೂ ಹೈಕಮಾಂಡ್ ತೀರ್ಮಾನಿಸಬಹುದು ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿನನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಬದಲಾವಣೆ ಹೈಕಮಾಂಡ್ ಆಯ್ಕೆ ಹೊರತು ಶಾಸಕರ ಆಯ್ಕೆಯಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶಾಸಕರ ಬಲವೇ ಮುಖ್ಯ. ಪಕ್ಷ ಗೆದ್ದ ಮೇಲೆ ಸಿಎಂ ಆಯ್ಕೆ ಆಗುತ್ತದೆ. ಶಾಸಕರ ಅಭಿಪ್ರಾಯ ಪಡೆದು ಮಾಡ್ತಾರೆ. ಹೈಕಮಾಂಡ್ ಅಬ್ಸರ್ವರ್ಸ್ ಕಳಿಸುತ್ತದೆ. ಅವರು ಶಾಸಕರ ಅಭಿಪ್ರಾಯ ಕೇಳ್ತಾರೆ. ಇಷ್ಟು ಜನ ಈ ರೀತಿ ಹೇಳಿದ್ದಾರೆ, ಉಳಿದವರು ಈ ರೀತಿ ಹೇಳಿದ್ದಾರೆ ಅಂತ ಹೇಳ್ತಾರೆ. ಮೊದಲ ಬಾರಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಹೀಗೆ. ಈಗಲೂ ಶಾಸಕರ ಅಭಿಪ್ರಾಯ ಪಡೆಯಬಹುದು. ಶಾಸಕ ಅಭಿಪ್ರಾಯ ಬೇಡ ಅಂತ ಹೈಕಮಾಂಡ್ ತೀರ್ಮಾನಿಸಬಹುದು ಎಂದು ಸೂಚ್ಯವಾಗಿ ಪ್ರತಿಕ್ರಿಯೆ ನೀಡಿದರು.
’ಸಹಜವಾಗಿ ನಾನು ಹೇಳಿದ್ದೆ’: ನೀವು ಸಿಎಂ ಆಸೆ ಇದೆ ಅಂತ ಹೇಳಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಹಜವಾಗಿ ನಾನು ಹೇಳಿದ್ದೆ. ಎಲ್ಲರೂ ಸಿಎಂ ಆಗಬಹುದು. ಹೈಕಮಾಂಡ್ ಯಾರನ್ನು ಮಾಡುತ್ತದೆ, ಅವರಿಗೆ ಜೈ ಅನ್ನುತ್ತೇವೆ. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಮೊದಲ ಸಾಲಿನಲ್ಲಿದ್ದರು. ನಾವು ಸೆಕೆಂಡ್ ಇದ್ದೇವೆ ಅಷ್ಟೇ ಎಂದು ನಾನು ಸಿಎಂ ಆಕಾಂಕ್ಷಿ ಅನ್ನೋದನ್ನು ಪರೋಕ್ಷವಾಗಿ ತಿಳಿಸಿದರು.
ಆರ್ಎಸ್ಎಸ್ ಬ್ಯಾನ್ ಪ್ರಸ್ತಾವನೆ ಬಂದರೆ ಪರಿಶೀಲನೆ ಮಾಡುತ್ತೇವೆ: ಸರ್ಕಾರಿ ಸ್ಥಳಗಳಲ್ಲಿ RSS ಕಾರ್ಯಚಟುವಟಿಕೆ ನಿಷೇಧ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರ ಎಲ್ಲವೂ ನಿಮಗೆ ಗೊತ್ತಿದೆ. ಅವರು ಪತ್ರ ಬರೆದು, ಶಾಲೆ ಮತ್ತು ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಚಟುವಟಿಕೆ ಬೇಡ ಅಂತ ಹೇಳಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರು ಅದರ ಬಗ್ಗೆ ಚರ್ಚೆ ಮಾಡಬಹುದು. ಮುಖ್ಯ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಳ್ತಾರೆ. ನಮ್ಮ ಇಲಾಖೆಗೆ ಬಂದರೆ ಅದರ ಸಾಧಕ ಬಾಧಕ ಪರಿಶೀಲನೆ ಮಾಡುತ್ತೇವೆ ಎಂದರು.