Breaking News

ಪತ್ನಿ ಕೊಂದು ಎರಡು ರಾತ್ರಿ ಶವದ ಜೊತೆಗೆ ಕಳೆದ ಪತಿ: ವಾಸನೆ ಬರುತ್ತಿದ್ದಂತೆ ಆರೋಪಿ‌ ಪರಾರಿ, ಕೊಲೆ ಕೇಸ್ ದಾಖಲು

Spread the love

ಬೆಳಗಾವಿ : ಪತ್ನಿಯನ್ನ ಕೊಲೆ ಮಾಡಿದ ಪತಿರಾಯ ಎರಡು ದಿನಗಳ ಕಾಲ ಶವದ ಜೊತೆಗೆ ಕಳೆದು ದುರ್ವಾಸನೆ ಬರುತ್ತಿದ್ದಂತೆ ಊರು ಬಿಟ್ಟಿ ಪರಾರಿಯಾಗಿರುವ ಘಟನೆ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಸಾಕ್ಷಿ ಕಂಬಾರ ಕೊಲೆಯಾದ ದುರ್ದೈವಿ. ಆಕಾಶ ಕಂಬಾರ ಕೊಲೆ ಆರೋಪಿ. ಮೇ. 24ರಂದು ಅದ್ದೂರಿಯಾಗಿ ಆಕಾಶ್ ಸಾಕ್ಷಿ ಅವರನ್ನು ಮದುವೆಯಾಗಿದ್ದ. ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಇದೆ ಅಂತಾ ಸುಳ್ಳು ಹೇಳಿ ವಿವಾಹ ಬಂಧಕ್ಕೆ ಒಳಗಾಗಿದ್ದ. ಐವತ್ತು ಗ್ರಾಂ ಚಿನ್ನ ಹಾಗೂ ಐದು ಲಕ್ಷ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಇದೇ ಕಾರಣಕ್ಕೆ ಆಕೆಯನ್ನ ಕೊಲೆ ಮಾಡಿದ್ದಾಗಿ ಆರೋಪಿಸಿ, ಕೊಲೆಯಾದ ಸಾಕ್ಷಿ ಕುಟುಂಬಸ್ಥರು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು – ಆಕಾಶ್​ ಪರಾರಿ: ಕೇಸ್ ದಾಖಲಿಸಿಕೊಂಡ ಪೊಲೀಸರು ಸದ್ಯ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಪರಾರಿಯಾಗಿರುವ ಗಂಡ ಆಕಾಶ್​ಗಾಗಿ ಬಲೆ ಬೀಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಸಾಕ್ಷಿ ಮೃತದೇಹ ಹಸ್ತಾಂತರ ಮಾಡಿದ್ದು, ಇಂದು ಸಂಜೆ ವೇಳೆ ಅಂತ್ಯಸಂಸ್ಕಾರ ನೆರವೇರಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದ್ದೇನು?: ‘ಸೋಮವಾರ ಮಧ್ಯಾಹ್ನ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಆಕಾಶ್ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಶವವನ್ನು ಬೆಡ್ ರೂಮ್​ನ ಮಂಚದ ಬಾಕ್ಸ್ ನಲ್ಲಿ ಹಾಕಿ, ತನ್ನ ತಾಯಿಗೆ ನಾವಿಬ್ಬರು ಗೋಕಾಕ್​ಗೆ ಹೋಗಿ ಬರುವುದಾಗಿ ಹೇಳಿದ್ದಾನೆ. ಆಕಾಶ ತಾಯಿ ಯಲ್ಲಮ್ಮ ದೇವಿ ಸೇವೆ ಮಾಡುತ್ತಿದ್ದರು. ಹೀಗಾಗಿ ಹೆಚ್ಚಾಗಿ ದೇವಸ್ಥಾನದಲ್ಲೇ ಉಳಿದುಕೊಳ್ಳುತ್ತಿದ್ದರು. ಮಂಗಳವಾರ ಆಕಾಶ್ ಅವರ ತಾಯಿ ಮನೆಯಲ್ಲಿ ಏನೋ ವಾಸನೆ ಬರ್ತಿದೆ ಅಂತಾ ಕೇಳಿದ್ದಾಳೆ. ಈ ವೇಳೆ, ಆಕೆಗೆ ಸುಳ್ಳು ಹೇಳಿ ಮತ್ತೆ ಮರೆಮಾಚುವ ಕೆಲಸ ಮಾಡಿದ್ದಾನೆ. ಇತ್ತ ಪತ್ನಿ ಅವರ ಅಕ್ಕನ ಮನೆಗೆ ಹೋಗಿದ್ದಾಳೆ ಅಂತಾ ಕೂಡ ಹೇಳಿದ್ದ. ಇನ್ನೂ ಇದೇ ರೀತಿ ಎರಡು ದಿನ ಪತ್ನಿ ಶವದ ಜೊತೆಗೆ ಕಳೆದ ಆಕಾಶ್ ರಾತ್ರಿ ಮೃತದೇಹ ಸಾಗಿಸಲು ಪ್ರಯತ್ನ ಪಟ್ಟು ವಿಫಲನಾಗಿದ್ದ. ಯಾವಾಗ ಆಕೆಯ ಮೃತದೇಹ ಸಾಗಿಸಲು ಆಗಲ್ಲ ಅಂತಾ ಗೊತ್ತಾಗುತ್ತೋ, ಆಗ ಮಂಚದ ಬಾಕ್ಸ್​ನಲ್ಲೇ ಶವ ಇಟ್ಟು ಕಥೆ ಕಟ್ಟಿದ್ದ. ನಿನ್ನೆ ಹೆಚ್ಚು ವಾಸನೆ ಬರುತ್ತಿದ್ದಂತೆ ಬೆಡ್ ರೂಮ್​ಗೆ ಹೋಗಿ ಆಕಾಶ್ ತಾಯಿ ನೋಡಿದಾಗ ಮಂಚದ ಕೆಳಗೆ ಶವ ಇರುವುದು ಗೊತ್ತಾಗಿದೆ. ಕೂಡಲೇ ಅಕ್ಕಪಕ್ಕದ ಜನರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ’ ಎಂದು ಘಟನೆ ಬಗ್ಗೆ ಎಸ್​​ಪಿ ಮಾಹಿತಿ ನೀಡಿದ್ದಾರೆ.

ಆರೋಪಿಗಾಗಿ ಪೊಲೀಸರ ಹುಡುಕಾಟ: ಒಂದೆಡೆ ವರದಕ್ಷಿಣೆ ತರಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಸಾಕ್ಷಿ ಕುಟುಂಬಸ್ಥರು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಮದುವೆಯಾದ ಬಳಿಕ ಸಾಕ್ಷಿ ತನ್ನ ಸ್ನೇಹಿತನ ಜೊತೆಗೆ ಮಾತನಾಡುತ್ತಿದ್ದಳು. ಈ ವಿಚಾರ ತಿಳಿದು ಆಕಾಶ್ ಪತ್ನಿಯ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇನ್ಯಾವತ್ತು ತಾನೂ ವಾಪಸ್ ಬರಲ್ಲ ಅಂತಾ ಆರೋಪಿ ಆಕಾಶ್ ತನ್ನ ತಾಯಿಗೆ ಹೇಳಿ ಹೋಗಿದ್ದು, ಜೊತೆಗೆ ಅಕ್ಕನಿಗೂ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹುಡುಕಬೇಡಿ ಅಂತ ಹೇಳಿದ್ದಾನೆ. ಇದೀಗ ಆತನ ಮೊಬೈಲ್ ಸ್ವಿಚ್ಡ್​ ಆಫ್ ಬರ್ತಿದೆ. ಹೀಗಾಗಿ, ಪೊಲೀಸರು ಎಲ್ಲ ಮಾಹಿತಿ ಆಧಾರದ ಮೇಲೆ ಹುಡುಕಾಟ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಕೋರ್ಟ್​​ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಆರೋಪಿ ಸಾವು

Spread the loveಬೆಂಗಳೂರು, ಅಕ್ಟೋಬರ್​ 09: ವಿಚಾರಣೆಗೆ ಕರೆತಂದಿದ್ದ ವೇಳೆ ನ್ಯಾಯಾಲಯದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪೋಕ್ಸೋ ಪ್ರಕರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ