ಬೆಂಗಳೂರು, ಅಕ್ಟೋಬರ್ 8: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ವಾಯು ಮಾಲಿನ್ಯದ (Air Pollution) ಪ್ರಮಾಣ ಹೆಚ್ಚಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ವಾಯುಮಾಲಿನ್ಯದ ಪ್ರಮಾಣ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಈಗಾಗಲೇ ಐಐಎಸ್ಸಿ ತಜ್ಞರು ಬೆಂಗಳೂರಿನಲ್ಲಿ ಈ ಹಿಂದೆ ಶೇ 70 ರಷ್ಟಿದ್ದ ಪರಿಸರದ ಪ್ರಮಾಣ ಶೇ 3 ಕ್ಕೆ ಇಳಿಕೆಯಾಗಿದೆ ಎಂಬ ವರದಿ ನೀಡಿದ್ದರು. ಇದೀಗ ಕೇಂದ್ರ ಸರ್ಕಾರದ ‘ಸ್ವಚ್ಛ ವಾಯು ಸರ್ವೇಕ್ಷಣ-2025 (Swachh Vayu Sarvekshan 2025)’ ವಾರ್ಷಿಕ ಶುದ್ಧ ಗಾಳಿ ಸಮೀಕ್ಷಾ ವರದಿಯಲ್ಲಿ ರಾಜಧಾನಿಯು 28 ರಿಂದ 36ನೇ ಸ್ಥಾನಕ್ಕೆ ಕುಸಿದಿದೆ.
ಬೆಂಗಳೂರು ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವೇನು?
ಮುಖ್ಯವಾಗಿ, ವಾಹನ ಸಂಚಾರ ಹೆಚ್ಚಳದಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಯೂ ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದಲೂ ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ಸದ್ಯ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಬಿಡುಗಡೆಗೊಳಿಸಿರುವ ‘ಸ್ವಚ್ಛ ವಾಯು ಸರ್ವೆಕ್ಷಣ-2025’ರ ವಾರ್ಷಿಕ ಶುದ್ಧ ಗಾಳಿ ಸಮೀಕ್ಷೆ ವರದಿಯಲ್ಲಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿದಿರುವುದು ಕಂಡುಬಂದಿದೆ.
ಬೆಂಗಳೂರು ವಾಯುಮಾಲಿನ್ಯ ಹೆಚ್ಚಳ: ತಜ್ಞರು ಹೇಳುವುದೇನು?
ಗಾರ್ಡನ್ ಸಿಟಿ ಎಂಬ ಬಿರುದು ಪಡೆದಿದ್ದ ಬೆಂಗಳೂರು ಇದೀಗ ಪರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ)-10 ಮತ್ತು ಪಿಎಂ -2.5 ಧೂಳಿನ ಕಣಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಬೆಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಜೆ ರೇಣುಕಾ ಪ್ರಸಾದ್, ಇದು ಆತಂಕಕಾರಿ ವಿಷಯ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮವಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.