ಬೆಂಗಳೂರು: ಸಿಎಂ ಬದಲಾವಣೆ ಸಂಬಂಧ ಹೇಳಿಕೆಗಳ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿ, ಯಾವಾಗ ಪಕ್ಷಕ್ಕೆ ತೀರ್ಮಾನ ತೆಗೆದುಕೊಳ್ಳುವ ಅಗತ್ಯ ಬರುತ್ತೋ ಆವಾಗ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ಕಾಂಗ್ರೆಸ್ಗೆ ತಮ್ಮ ಪಕ್ಷದಲ್ಲಿ ಏನಾಗಬೇಕು ಎಂಬ ಬಗ್ಗೆ ನಿರ್ಧರಿಸುವ ಸಾಮರ್ಥ್ಯ ಇದೆ. ಅದನ್ನು ನಮ್ಮ ಪಕ್ಷಕ್ಕೆ ಬಿಟ್ಟು ಬಿಡಿ. ಪಕ್ಷ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಖರ್ಗೆ ಆರೋಗ್ಯ ವಿಚಾರಣೆ: ಕೆ.ಸಿ. ವೇಣುಗೋಪಾಲ್ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ (ಅ.3) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 24×7 ಕಠಿಣ ಪರಿಶ್ರಮದ ನಾಯಕರಾಗಿದ್ದಾರೆ. ಪಕ್ಷ ಏನು ತೀರ್ಮಾನಿಸುತ್ತೆ ಅದನ್ನು ಯಾವುದೇ ಹಿಂಜರಿಕೆ ಇಲ್ಲದೆ ಮಾಡುತ್ತಾರೆ ಎಂದರು.
ದೇಶದ ಯಾವ ಮೂಲೆಗಾದರೂ ಹೋಗುತ್ತಿದ್ದರು. ಈಗ ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಕೆಲ ದಿನ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.