Breaking News

ದಕ್ಷಿಣದಿಂದ ಉತ್ತರ ಕರ್ನಾಟಕಕ್ಕೆ ವಿಸ್ತರಿಸಿದ ದಸರಾ ಬೊಂಬೆ ಪ್ರದರ್ಶನ

Spread the love

ಹಾವೇರಿ: ದಸರಾ ಹಬ್ಬದ ವೇಳೆ ಮನೆಗಳಲ್ಲಿ ಬೊಂಬೆ ಕೂರಿಸುವ ಸಂಪ್ರದಾಯ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಹಿಂದಿನಿಂದಲೂ ಇದೆ. ಉತ್ತರ ಕರ್ನಾಟಕದಲ್ಲಿ ಈ ಪದ್ಧತಿ ಇಲ್ಲ. ಆದರೆ ಶಿಗ್ಗಾಂವಿ ತಾಲೂಕು ಬಂಕಾಪುರದ ಗೃಹಿಣಿಯೊಬ್ಬರು ಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸುವ ಮೂಲಕ ದಕ್ಷಿಣ ಕರ್ನಾಟಕದ ಸಂಪ್ರದಾಯವನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಿದ್ದಾರೆ.

ಅಂದಹಾಗೆ ಅವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದಾರೆ. ಅಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಮಹಿಳೆಗೆ ತವರು ಮನೆಯಿಂದ ಬೊಂಬೆ ನೀಡುವ ಸಂಪ್ರದಾಯವಿದೆ. ಈ ರೀತಿ ಬೊಂಬೆ ಪಡೆದ ಮಗಳು ತನ್ನ ಗಂಡನ ಮನೆಯಲ್ಲಿ ಬೊಂಬೆ ಕೂರಿಸಬೇಕು. ಈ ಹಿನ್ನೆಲೆಯಲ್ಲಿ ಹಾಸನದಿಂದ ಬಂಕಾಪುರಕ್ಕೆ ಬಂದ ಪದ್ಮಾ ಹಿರೇಮಠ ಕಳೆದ ಮೂರು ದಶಕಗಳಿಂದ ಬೊಂಬೆ ಕೂರಿಸುತ್ತಿದ್ದಾರೆ.

ರಾಮಾಯಣ, ಮಹಾಭಾರತ ಕಟ್ಟಿಕೊಡುವ ಪ್ರದರ್ಶನ: ವಿಷ್ಣುವಿನ ದಶಾವತಾರಗಳು, ರಾಮಾಯಣ, ಮಹಾಭಾರತ, ಸಂಗೀತೋಪಕರಣಗಳು ಸೇರಿದಂತೆ ವಿವಿಧ ಹಣ್ಣುಗಳು, ತರಕಾರಿಗಳ ಗೊಂಬೆಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಹಲವು ತರಹದ ಪಕ್ಷಿಗಳ ಬೊಂಬೆಗಳು ಪಕ್ಷಿಲೋಕವನ್ನೇ ಅನಾವರಣಗೊಳಿಸಿವೆ. ಸವದತ್ತಿ ಯಲ್ಲಮ್ಮ, ಯಡೆಯೂರು ಸಿದ್ದಲಿಂಗೇಶ, ಪಂಡಿತ ಪುಟ್ಟರಾಜ ಗವಾಯಿಗಳು ಸೇರಿದಂತೆ ವಿವಿಧ ಮೂರ್ತಿಗಳು ನೋಡುಗರಲ್ಲಿ ಭಕ್ತಿಭಾವ ಮೂಡಿಸುತ್ತವೆ. ಶಿವ, ವಿಷ್ಣು, ಬ್ರಹ್ಮ, ಗೌರಿ, ಪಾರ್ವತಿ ಮತ್ತು ಕೃಷ್ಣ ಸೇರಿದಂತೆ ವಿವಿಧ ದೇವಾನುದೇವತೆಗಳ ಮೂರ್ತಿಗಳು ಆಕರ್ಷಣೀಯವಾಗಿವೆ.

ತವರು ಮನೆಯಿಂದ ಬಳುವಳಿಯಾಗಿ ಬಂದ ಪ್ರದರ್ಶನ: ಪದ್ಮಾ ಮದುವೆಯಾಗಿ ಬಂದಾಗ ತವರು ಮನೆಯವರು ಒಂದು ಗಂಡು ಮತ್ತು ಒಂದು ಹೆಣ್ಣು ಬೊಂಬೆಯನ್ನು ಉಡುಗೂರೆಯಾಗಿ ನೀಡಿದ್ದರು. ಇದು ಸಂಪ್ರದಾಯ, ಈ ರೀತಿ ನೀಡಿರುವ ಬೊಂಬೆಗಳನ್ನು ದಸರಾದ ವೇಳೆ ಮನೆಯಲ್ಲಿ ಕೂರಿಸುವ ಸಂಪ್ರದಾಯವನ್ನು ಪದ್ಮಾ ಅವರು ಆರಂಭಿಸಿದ್ದರು.

ವರ್ಷದಿಂದ ವರ್ಷಕ್ಕೆ ಇವರ ಗೊಂಬೆಗಳ ಸಂಖ್ಯೆ ಅಧಿಕವಾಗುತ್ತಲೇ ಸಾಗುತ್ತಿದೆ. ಇವರು ಬೊಂಬೆ ಕೂರಿಸುತ್ತಿದ್ದಂತೆ ಪರಿಚಯಸ್ಥರು, ಸ್ನೇಹಿತರು ಮತ್ತು ನೆರೆಹೊರೆಯವರೂ ಸಹ ಹೊಸ ಬೊಂಬೆಗಳನ್ನು ತಂದು ಪ್ರದರ್ಶನಕ್ಕಿಟ್ಟಿದ್ದಾರೆ. ಬೊಂಬೆ ಪ್ರದರ್ಶನದಲ್ಲಿ ಗಣೇಶನಿಗೆ ಪ್ರಥಮ ಆದ್ಯತೆ ನೀಡಿದ್ದು, ವರ್ಷದಿಂದ ವರ್ಷಕ್ಕೆ ಗಣೇಶನ ಮೂರ್ತಿಗಳ ಸಂಖ್ಯೆ ಅಧಿಕವಾಗುತ್ತಲೇ ಸಾಗಿದೆ. ಇವರ ಬೊಂಬೆ ಕೂರಿಸುವ ಸಂಪ್ರದಾಯ ಸ್ಥಳೀಯರಿಗೆ ಸಂತಸ ತಂದಿದೆ. ಸ್ಥಳೀಯರು ಸಹ ನವರಾತ್ರಿಯ ದಿನಗಳಲ್ಲಿ ಪದ್ಮಾ ಅವರ ಮನೆಗೆ ಬಂದು ಬೊಂಬೆ ಕೂರಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ.

ದಸರಾದಲ್ಲಿ ಪದ್ಮಾ ಅವರ ಮನೆಗೆ ಆಗಮಿಸುವ ಭಕ್ತರು: ಬಂಕಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬೊಂಬೆ ಪ್ರದರ್ಶನ ನೋಡಲು ನವರಾತ್ರಿ ದಿನಗಳಲ್ಲಿ ಪದ್ಮಾ ಅವರ ಮನೆಗೆ ಭೇಟಿ ನೀಡುತ್ತಾರೆ. ಈ ರೀತಿ ಬೊಂಬೆಗಳನ್ನು ಕೂರಿಸಿ ಅವುಗಳ ಮಹತ್ವ ಸಾರುತ್ತಿರುವುದಕ್ಕೆ ಮಹಿಳೆಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಬೊಂಬೆಗಳಿಗೆ ವಿದ್ಯುತ್ ದೀಪಾಲಂಕಾರ ಸಹ ಮಾಡಲಾಗಿದೆ. ಬೊಂಬೆ ನೋಡಲು ಬರುವ ಮಹಿಳೆಯರು ಬೊಂಬೆಗಳಿಗೆ ಅಕ್ಷತೆ ಹಾಕಿ ಆರತಿ ಮಾಡುತ್ತಾರೆ.


Spread the love

About Laxminews 24x7

Check Also

ಅರಭಾವಿ ಆಂಜನೇಯ ದೇವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ