ಬೈಂದೂರು(ಉಡುಪಿ): ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.
ರಿಷಬ್ ಶೆಟ್ಟಿ ಪತ್ನಿ ಸಹಿತ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿದರು. ತಮ್ಮ ಪ್ರತಿ ಸಿನಿಮಾ ಬಿಡುಗಡೆಗೂ ಮುನ್ನ ರಿಷಬ್ ಅವರು ತಾಯಿ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಇನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅವರನ್ನು ಗೌರವಿಸಿತು.
ಹುಟ್ಟೂರಲ್ಲೇ ಶೂಟಿಂಗ್: ಕಾಂತಾರ ಅಧ್ಯಾಯ 1 ಚಿತ್ರದ ಶೂಟಿಂಗ್ಗಾಗಿ ಕುಂದಾಪುರದಲ್ಲಿ ದೊಡ್ಡ ಸ್ಟುಡಿಯೋ ಮಾಡಿ ಸೆಟ್ ಹಾಕಲಾಗಿತ್ತು. ಸಿನಿಮಾದ ಬಹುತೇಕ ಶೂಟಿಂಗ್ ಅಲ್ಲಿಯೇ ನಡೆದಿದೆ. ಈಗಾಗಲೇ ಶೂಟಿಂಗ್ ಪೂರ್ತಿ ಆಗಿದ್ದು ಬಿಡುಗಡೆಗೆ ಸಿದ್ಧಗೊಂಡಿದೆ. ಇಂಡೋರ್, ಔಟ್ಡೋರ್ ಎಲ್ಲವೂ ಕುಂದಾಪುರದಲ್ಲೇ ಶೂಟ್ ಮಾಡಲಾಗಿದೆ ಎಂದು ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
2022ರಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್ 1ರ ಮೇಲಿನ ನಿರೀಕ್ಷೆ ಬೆಟ್ಟದಷ್ಟು ಅಧಿಕವಾಗಿದೆ. ಇಡೀ ಕಾಂತಾರ ತಂಡ ಶ್ರದ್ಧೆಯಿಂದ ಪ್ರೀಕ್ವೆಲ್ ಕೆಲಸಗಳನ್ನು ಮಾಡಿದೆ. ‘ಕಾಂತಾರ’ ಸಿನಿಮಾಗಿಂತ ಹಿಂದೇನಾಗಿತ್ತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ಅವರು ಕಲರಿಪಯಟ್ಟು ಕೂಡ ಕಲಿತಿದ್ದಾರೆ ಅನ್ನೋದು ವಿಶೇಷ.