ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಆರಂಭದಲ್ಲಿ ವಿಘ್ನ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಅಂದುಕೊಂಡಷ್ಟು ವೇಗವಾಗಿ ಸಮೀಕ್ಷೆ ಕಾರ್ಯ ನಡೆಸಲು ಅಡ್ಡಿಯಾಗಿದೆ. ಅಲ್ಲದೆ ಸಮೀಕ್ಷೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸುವ ಸಂಬಂಧ ಅಧಿಕಾರಿಗಳ ಸಭೆ ಕರೆದಿದ್ದು, ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನ್ಲೈನ್ ಮುಖಾಂತರ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವೇಳೆ ಸರ್ವರ್ ಸಮಸ್ಯೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಸಮೀಕ್ಷೆ ಸಂಬಂಧ ಉದ್ಭವವಾಗಿರುವ ಗೊಂದಲಗಳ ಬಗ್ಗೆ ಸಮಾಲೋಚಿಸಿ ಇಂದು ಅಥವಾ ನಾಳೆಯೊಳಗೆ ಇತ್ಯರ್ಥ ಪಡಿಸುತ್ತೇನೆ ಎಂದರು.
ಎರಡು ದಿನಗಳಿಂದ ಸರ್ವೆ ಕಾರ್ಯ ನಡೆಯುತ್ತಿದೆ. ಕೆಲ ತಾಂತ್ರಿಕ ತೊಡಕು ಹೊರತುಪಡಿಸಿದರೆ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ನಿಗದಿತ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳಿಸುತ್ತೇವೆ. ಬೆಂಗಳೂರಿನಲ್ಲಿ ಕೆಲವೊಂದು ಕಾರಣಕ್ಕೆ ಸಮೀಕ್ಷೆ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದರು.
ಸಮೀಕ್ಷೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನ್ಯಾಯಾಲಯದ ವಿಚಾರವಾಗಿ ಏನೂ ಮಾತನಾಡಲು ಆಗದು. ಆದೇಶ ಬರದೆ ನಾನು ಏನೂ ಮಾತನಾಡುವುದಿಲ್ಲ. ಕಾನೂನು ಪಾಲನೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಅಕ್ಟೋಬರ್ 7ರ ವರೆಗೆ ಸಮೀಕ್ಷೆ ನಡೆಯಲಿದ್ದು ಅನಂತರ ವಿಸ್ತರಣೆ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಸಮೀಕ್ಷೆಗೆ ಸಂಬಂಧಿಸಿದಂತೆ ನನ್ನ ಮುಂದೆ ಯಾವ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಬದಲಾಗಿ ಕೆಲವರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಆದಷ್ಟು ಬೇಗ ಸಮೀಕ್ಷೆ ಆರಂಭಿಸಲಾಗುವುದು. ಆಯೋಗದ ಎಲ್ಲಾ ವಿಚಾರಗಳಲ್ಲಿಯೂ ನಾನು ಮಧ್ಯಪ್ರವೇಶಿಸುವುದಿಲ್ಲ. ಇಂದಿನ ಸಭೆಯಲ್ಲಿ ಅಧಿಕಾರಿಗಳ ಜೊತೆ ಸಮಾಲೋಚಿಸುತ್ತೇನೆ. ಅಂತಿಮವಾಗಿ ಆಯೋಗ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದರ ಬಗ್ಗೆ ನೋಡುತ್ತೇನೆ ಎಂದು ತಿಳಿಸಿದರು.