ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಹಾರ ಮೇಳ ಆಯೋಜಿಸಿದ್ದು, ಬಂಬೂ ಬಿರಿಯಾನಿ ಜನರನ್ನು ಸೆಳೆಯುತ್ತಿದೆ. ಮೇಳಕ್ಕೆ ಬರುತ್ತಿರುವವರು ಬಂಬೂ ಬಿರಿಯಾನಿ ಸ್ಟಾಲ್ ಮುಂದೆ ಸಾಲುಗಟ್ಟುತ್ತಿದ್ದಾರೆ. ಬಂಬೂ ಬಿರಿಯಾನಿ ಹೇಗೆ ತಯಾರಾಗುತ್ತದೆ, ಇದರಲ್ಲಿರುವ ಔಷಧೀಯ ಗುಣಗಳು ಯಾವುವು ಎಂಬ ಬಗ್ಗೆ ಆದಿವಾಸಿ ಕೃಷ್ಣಪ್ಪ ಅವರು ಈಟಿವಿ ಭಾರತ್ಗೆ ವಿವರಿಸಿದರು.
ಮೈಸೂರು ದಸರಾ ಎಂದರೆ ಜಂಬೂ ಸವಾರಿ, ದಸರಾ ದೀಪಲಂಕಾರ ನೋಡಿಕೊಂಡು ಜನರು ದಸರಾ ಆಹಾರ ಮೇಳಕ್ಕೆ ಬಂದು ಇಲ್ಲಿನ ವಿಶೇಷ ಆಹಾರಗಳನ್ನು ಸೇವಿಸಿ ಹೋಗುತ್ತಾರೆ. ಈ ಬಾರಿ ಆಹಾರ ಮೇಳದಲ್ಲಿ ಗಮನ ಸೆಳೆಯುತ್ತಿರುವ ಪ್ರಮುಖ ಆಹಾರ ಮಳಿಗೆ ಎಂದರೆ ಅದು ಆದಿವಾಸಿಗಳ ಬಂಬೂ ಬಿರಿಯಾನಿ.ಹಿಂದಿನ ನಾಗರಿಕತೆಯ ಆರಂಭದ ಕಾಲದಲ್ಲಿ ಆಹಾರ ತಯಾರು ಮಾಡಲು ಪಾತ್ರೆಗಳು ಇರಲಿಲ್ಲ. ಆ ಸಂದರ್ಭದಲ್ಲಿ ಆದಿವಾಸಿ ಜನರು ತಮ್ಮ ವಾಸದ ಪ್ರದೇಶದ ಕಾಡಿನ ಪ್ರದೇಶದಲ್ಲಿ ಸಿಗುವ ಬಂಬೂಗಳನ್ನು ಬಳಸಿ ತಮಗೆ ಬೇಕಾದ ಆಹಾರವನ್ನು ತಯಾರು ಮಾಡಿಕೊಳ್ಳುತ್ತಿದ್ದರು. ಅದು ಆರೋಗ್ಯಪೂರ್ಣ ಆಹಾರವಾಗಿರುತ್ತಿತ್ತು. ಈಗ ಅದೇ ರೀತಿಯ ಆಹಾರವನ್ನು ತಯಾರು ಮಾಡುವ ಪದ್ಧತಿ ಮೈಸೂರು ದಸರಾದ ಆಹಾರ ಮೇಳದಲ್ಲಿ ಕಾಣಸಿಗುತ್ತಿದೆ.