ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ದಲಿತ ಕ್ರಿಶ್ಚಿಯನ್ ನಮೂದು ಹಿಂಪಡೆಯುವಂತೆ ಬಿಜೆಪಿ ನಿಯೋಗ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿತು.
ಬೆಂಗಳೂರಿನ ವಸಂತನಗರದ ಆಯೋಗದ ಕಚೇರಿಯಲ್ಲಿ ಅಧ್ಯಕ್ಷ ಮಧುಸೂದನ್ ನಾಯಕ್ಗೆ ಮನವಿ ಸಲ್ಲಿಕೆ ಮಾಡಿದರು. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ದಲಿತ ಕ್ರಿಶ್ಚಿಯನ್ ನಮೂದು ಹಿಂಪಡೆಯುವಂತೆ ಹಾಗೂ ಮತ್ತೊಮ್ಮೆ ಎಸ್‌ಸಿ ಸಮುದಾಯದ ಗಣತಿ ನಡೆಸದಂತೆ ಆಗ್ರಹಿಸಿದರು. ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಲ್ಲಿ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದರು. ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಎದುರು ಆಕ್ರೋಶ ವ್ಯಕ್ತಪಡಿಸಿದರು.
15 ಎಸ್‌ಸಿ ಉಪಜಾತಿಗಳಿಗೆ ಕ್ರಿಶ್ಚಿಯನ್ ಟ್ಯಾಗ್ ಕೂಡಲೇ ಕೈ ಬಿಡಬೇಕು. ಎರಡು ತಿಂಗಳ ಹಿಂದೆ ನಾಗಮೋಹನ್ ದಾಸ್ ವರದಿ ನೀಡಿದೆ. ಆಗ ಹಿಂದುಳಿದ ಮತ್ತು ದಲಿತ ಜಾತಿಗಳ ಜೊತೆಗೆ 15 ಕ್ರಿಶ್ಚಿಯನ್ ಜಾತಿ ಸೇರಿಸಿರಲಿಲ್ಲ. ಈ ಸಮೀಕ್ಷೆಯಲ್ಲಿ ಏಕೆ ಕ್ರಿಶ್ಚಿಯನ್ ಹೆಸರಿನ ಟ್ಯಾಗ್ ಎಂದು ಬಿಜೆಪಿ ನಾಯಕರು ಕಿಡಿಕಾರಿದರು. ಕ್ರಿಶ್ಚಿಯನ್ ಜೋಡಿತ ದಲಿತ ಹೆಸರಿನ ಜಾತಿಗಳ ಹೆಸರು ತೆಗೆಯುವವರೆಗೂ ಸಮೀಕ್ಷೆ ಮುಂದೂಡಿ ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಭೇಟಿ ಬಳಿಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಮೀಕ್ಷೆ ನಿನ್ನೆಯಿಂದ ಶುರುವಾಗಿದೆ, ಗೊಂದಲದ ಗೂಡಾಗಿದೆ ಈ ಸಮೀಕ್ಷೆ. ಇಂದು ನಾವು ನಮಗಿರುವ ಗೊಂದಲಗಳ ಬಗ್ಗೆ ಚರ್ಚಿಸಲು ಬಂದಿದ್ವಿ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಯಾದವ ಈ ಜಾತಿ ಜತೆ ಸೇರಿಸಿದ್ದ ಕ್ರಿಶ್ಚಿಯನ್ ಹೆಸರಿನ ಜಾತಿಗಳನ್ನು, ಆ್ಯಪ್‌ನಲ್ಲಿ ಹೈಡ್ ಮಾಡಿದ್ದಾರೆ. ಅದೇ ರೀತಿ ಪರಿಶಿಷ್ಟ ಜಾತಿಗಳ ಜತೆ ಕ್ರಿಶ್ಚಿಯನ್ ಹೆಸರಿನ 15 ಜಾತಿಗಳ ಹೆಸರುಗಳನ್ನು ಹೈಡ್ ಮಾಡಿಲ್ಲ. ಇದನ್ನು ನಾವು ಪ್ರಶ್ನೆ ಮಾಡಿದ್ದೇವೆ ಎಂದರು.
ಮೂಲಜಾತಿಗಳಲ್ಲೇ ಸವಲತ್ತು ಕೊಡುವ ಬಗ್ಗೆ ಸಮೀಕ್ಷೆ ನಂತರ ತೀರ್ಮಾನ ಮಾಡ್ತಾರಂತೆ, ಇವರ್ಯಾರು ತೀರ್ಮಾನ ಮಾಡಲು?. ದಲಿತ ಕ್ರೈಸ್ತ ಅಂತ ಇದ್ರೆ ಸವಲತ್ತು ಸಿಗಲ್ಲ. ಇವರಲ್ಲೇ ಗೊಂದಲ ಇದೆ. ಇವರ ರಿಮೋಟ್ ಕಂಟ್ರೋಲ್ ಬೇರೆ ಕಡೆ ಇದೆ. ಆಯೋಗ ಹಿಂದುತ್ವ ವಿರೋಧಿ ನೀತಿ ಅನುಸರಿಸ್ತಿದೆ. ಮತಾಂತರ ಆಗಿದ್ರೆ ಮತಾಂತರಗೊಂಡ ಧರ್ಮದ ಹೆಸರನ್ನೇ ಬರೆದುಕೊಳ್ಳಿ. ದಲಿತ ಕ್ರಿಶ್ಚಿಯನ್ ಜಾತಿಗಳ ಹೆಸರು ತಂದ್ರೆ ನಮ್ಮ ಸಮುದಾಯಗಳು ಸಮೀಕ್ಷೆ ನಡೆಯಲು ಬಿಡಲ್ಲ. ಕಾಂತರಾಜ್, ಜಯಪ್ರಕಾಶ್ ಹೆಗಡೆ, ನಾಗಮೋಹನದಾಸ್ ವರದಿಗಳಲ್ಲಿ ದಲಿತ ಸಮುದಾಯಗಳ ಜತೆ ಕ್ರಿಶ್ಚಿಯನ್ ಹೆಸರು ಇರಲಿಲ್ಲ. ಇಂದೇ ಈ ಗೊಂದಲ ನಿವಾರಿಸಲು ತಿಳಿಸಿದ್ದೇವೆ ಎಂದರು.
ಇದೇ ವೇಳೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿನ ಗೊಂದಲದ ಬಗ್ಗೆ ಮನವಿ ಸಲ್ಲಿಸಿದ್ದೆವು. ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್ ನಾಮಕರಣ ಕೈ ಬಿಡಬೇಕೆಂದು ಒತ್ತಾಯ ಮಾಡಿದ್ದರೂ ಇನ್ನೂ ಆಯೋಗ ಸ್ಪಷ್ಟಪಡಿಸಿಲ್ಲ. 33 ಉಪ ಜಾತಿಗಳನ್ನು ಕೈ ಬಿಡಲು ನನಗೆ ರಾಜಕೀಯ ಒತ್ತಡ ಇತ್ತು ಎಂದು ಆಯೋಗದ ಅಧ್ಯಕ್ಷರು ಹೇಳುತ್ತಾರೆ. ಗೊಂದಲದ ವಾತಾವರಣವನ್ನು ಆಯೋಗವೇ ಸೃಷ್ಟಿ ಮಾಡಿದೆ ಎಂದು ಹೇಳಿದರು.