ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಕುರಿತು ಸರ್ಕಾರ ಇಂದು ಆದೇಶ ಹೊರಡಿಸಿದೆ.
ಈ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತವಾಗಲಿದ್ದು, ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಅನುಷ್ಠಾನಗೊಳ್ಳಲಿದೆ.
ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದು ರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಅಕ್ಟೋಬರ್‌ನಿಂದಲೇ ಇದರ ಪ್ರಯೋಜನಗಳು ಲಭ್ಯ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬಂದ ದಿನಾಂಕದಿಂದ ಪ್ರಸ್ತುತ ಜಾರಿಯಲ್ಲಿರುವ “ಜ್ಯೋತಿ ಸಂಜೀವಿನಿ” ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾಸಿಕ ವಂತಿಕೆಯನ್ನು ಪಾವತಿಸುವುದು ಹೇಗೆ?: ಈ ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID)ಗೆ ಜಮಾ ಮಾಡಬೇಕು. (ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಓಗಳಿಗೆ HRMS ಮುಖಾಂತರ ತಿಳಿಸಲಾಗುತ್ತದೆ).
ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಓ ರವರಿಗೆ ಮಾಹಿತಿ ನೀಡಬೇಕು.
HRMS ವ್ಯಾಪ್ತಿಯಲ್ಲಿರದ (ಬೇರೆ ಇಲಾಖೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ನ ಸೇವೆ) ರಾಜ್ಯ ಸರ್ಕಾರಿ ನೌಕರರಾಗಿದ್ದರೆ, ಅಂತಹ ನಿಯೋಜಿತ ನೌಕರರ ಮಾಸಿಕ ವೇತನದಲ್ಲಿ ವಂತಿಕೆಯನ್ನು ಕಟಾಯಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಯೋಜನೆಗೆ ಮಾಸಿಕ ವಂತಿಕೆಯನ್ನು ಮೇ 2025ರಿಂದ ಸ್ವಯಂಚಾಲಿತವಾಗಿ ಕಟಾಯಿಸಲಾಗುವುದೆಂದು 19.04.2025ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಇದನ್ನು ಮಾರ್ಪಡಿಸಿ ವಂತಿಕೆಯನ್ನು ಅಕ್ಟೋಬರ್ 2025ರ ವೇತನದಿಂದ ಮುಂದಿನಂತೆ ಕಟಾಯಿಸಲಾಗುತ್ತದೆ.